ಹಾಸನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ‘ಪೆನ್ ಡ್ರೈವ್’- ಸಮಗ್ರ ತನಿಖೆಗೆ ಅನುಪಮಾ ಮಹೇಶ್ ಒತ್ತಾಯ-ಸಂಸದರ ಏಜೆಂಟ್‌ ಗಳಿಂದ ದೂರು ದಾಖಲು

ಮಂಗಳೂರು(ಹಾಸನ): ಲೋಕಸಭೆ ಚುನಾವಣೆ ಸಮಯ ಹತ್ತಿರವಾಗುತ್ತಿದ್ದಂತೆ ಹಾಸನ ಜಿಲ್ಲೆಯ ರಾಜಕೀಯ ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳ ಮಾಹಿತಿಯುಳ್ಳ ಪೆನ್ ಡ್ರೈವ್‌ಗಳು ಪಾರ್ಕ್, ಕ್ರೀಡಾಂಗಣ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುತ್ತಿವೆ ಎಂಬ ವದಂತಿ ಹರಡಿದ್ದು, ಸಂಚಲನ ಮೂಡಿಸಿದೆ.

ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳಿರುವ ವಿಡಿಯೋಗಳನ್ನು ಪೆನ್ ಡ್ರೈವ್‌ಗಳಲ್ಲಿ ತುಂಬಿ ಅನಾಮಧೇಯವಾಗಿ ಹರಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ. ಕೆಲ ತಿಂಗಳ ಹಿಂದೆ ಯುವ ನಾಯಕರು ನ್ಯಾಯಾಲಯದ ಮೊರೆ ಹೋಗಿ, ತಮಗೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದರು‌ ಎನ್ನಲಾಗಿದೆ. ಇದೀಗ, ಎರಡು ದಿನದಿಂದ ವಿಡಿಯೋಗಳು ಪೆನ್‌ಡ್ರೈವ್‌ಗಳ ಮೂಲಕ ಹರಿದಾಡುತ್ತಿವೆ ಎನ್ನಲಾಗಿದ್ದು, ಅವರ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಇದು ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂದೂ ಹೇಳಲಾಗುತ್ತಿದೆ.

ಇನ್ನೊಂದೆಡೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೆನ್‌ ಡ್ರೈವ್ ಹಂಚಿಕೆ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಅವರ ತಾಯಿ ಅನುಪಮಾ ಮಹೇಶ್ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆನ್ ಡ್ರೈವ್ ಹಂಚಿಕೆಯಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ವಕೀಲ ಜಿ. ದೇವರಾಜೇಗೌಡ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಹಿಂದೆ ಪೆನ್ ಡ್ರೈವ್ ತಮ್ಮ ಬಳಿ ಇದೆ. ಅದನ್ನು ಬಿಡುಗಡೆ ಮಾಡುವುದಾಗಿಯೂ ದೇವರಾಜೇಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ಅವರೇ ಏಕೆ ಈ ಕೆಲಸ ಮಾಡಿಸಿರಬಾರದು’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಹಾಲಿ ಸಂಸದರ ಚುನಾವಣಾ ಏಜೆಂಟ್‌ಗಳು ಸಂಸದರ ಕೆಲವು ಮಾರ್ಫ್‌ ಮಾಡಿದ ಅಶ್ಲೀಲ ವಿಡಿಯೋಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ ಎಂದು ದೂರು ದಾಖಲಿಸಿದ್ದಾರೆ.

 

LEAVE A REPLY

Please enter your comment!
Please enter your name here