ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ-ಪದ್ಮರಾಜ್‌ ಪೂಜಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಕಳೆದ ಹಲವು ವರ್ಷಗಳಿಂದ ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯೊಂದಿಗೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮತದಾರರು ಬದಲಾವಣೆಯನ್ನು ಬಯಸಿದ್ದು, ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ನನ್ನನ್ನು ಗೆಲ್ಲಿಸಿ ಎಂದು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಎ.24ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು 40 ವರ್ಷ ಕಾಂಗ್ರೆಸ್‌ ಸಂಸದರು ಪ್ರತಿನಿಧಿಸಿದ್ದಾಗ ಅಭಿವೃದ್ಧಿ ನಡೆದಿತ್ತು. 1991ರಿಂದ ಅಧಿಕಾರಕ್ಕೆ ಬಂದ ಬಿಜೆಪಿಯು ಜನರ ನಡುವೆ ಕಂದಕ ಉಂಟು ಮಾಡಿ ಚುನಾವಣೆ ಗೆದ್ದಿದೆ ಎಂದು ಅವರು ಆರೋಪಿಸಿದರು. ಮೆಡಿಕಲ್‌ ಟೂರಿಸಂ, ಎಜುಕೇಶನ್‌ ಟೂರಿಸಂ ಸಹಿತ ಇಲ್ಲಿನ ಸಂಸ್ಕೃತಿ, ದೈವ-ದೇವರು, ಯಕ್ಷಗಾನ, ಕಂಬಳ, ಪ್ರಾಕೃತಿಕ ಸೌಂದರ್ಯ, ಜನಪದ ಕ್ರೀಡೆಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಇದೆ. ಮುಂಬಯಿಯಂತೆ ಮಂಗಳೂರು ನಗರವೂ ರಾತ್ರಿ ಹೊತ್ತಿನಲ್ಲೂ ವಾಣಿಜ್ಯ ನಗರಿಯಾಗಿ ಆರ್ಥಿಕವಾಗಿ ಸದೃಢವಾಗುವ ಎಲ್ಲ ಅರ್ಹತೆಯನ್ನು ಪಡೆದಿದೆ. ಕಾಂಗ್ರೆಸ್‌ ಬಡವರ ಬಗ್ಗೆ ಸದಾ ಚಿಂತನೆ ಹೊಂದಿ ನುಡಿದಂತೆ ನಡೆದ ಪಕ್ಷ. ಕೇಂದ್ರದಲ್ಲಿ ಕಾಂಗ್ರೆಸ್‌ ಘೋಷಿಸಿರುವ ಹೊಸ ಗ್ಯಾರಂಟಿಗಳ ಬಗ್ಗೆಯೂ ಪ್ರಚಾರ ವೇಳೆ ಮತದಾರರಿಗೆ ಮನವರಿಕೆ ಮಾಡಲಾಗಿದೆ ಎಂದು ಪದ್ಮರಾಜ್‌ ಪೂಜಾರಿ ಅವರು ವಿವರಿಸಿದರು.

ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರನ್ನು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಿ ಅವರು ಜೈಲು ಸೇರುವಂತೆ ಮಾಡಿ ಅವರ ಪೋಷಕರನ್ನು ಅನಾಥ ವಾಗಿಸಿರುವುದೇ ಬಿಜೆಪಿಯ ಸಾಧನೆ. ಇದು ಬಿಜೆಪಿಯ ದೇಶಪ್ರೇಮವೇ ಎಂದು ಪದ್ಮರಾಜ್‌ ಅವರು ಪ್ರಶ್ನಿಸಿದರು.ಪದ್ಮರಾಜ್‌ ಅವರು ಇತ್ತೀಚಿನ ದಿನಗಳಲ್ಲಿ ಪದ್ಮರಾಜ್‌ ಪೂಜಾರಿ ಎಂದು ಗುರುತಿಸುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಪದ್ಮರಾಜ್‌ ರಾಮಯ್ಯ ನನ್ನ ಹೆಸರು. ಪದ್ಮರಾಜ್‌ನ ಜಾತಿಯ ಬಗ್ಗೆ ಕೆಲವರು ಪ್ರಶ್ನೆ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡಿದ್ದರು. ಪದ್ಮರಾಜ್‌ ಎಂದಿಗೂ ಪೂಜಾರಿ. ನನ್ನ ಜಾತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿತ್ತು. ಅದಕ್ಕಾಗಿ ಪದ್ಮರಾಜ್‌ ಹೆಸರಿಗೆ “ಪೂಜಾರಿ’ ಸೇರಿಸಿದೆ ಎಂದರು.

ಹಿಂದುತ್ವ, ಮೋದಿಯವರ ಹೆಸರಿನಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಪದ್ಮರಾಜ್‌ ಕೂಡ ಒಬ್ಬ ಹಿಂದೂ. ಸನಾತನ ಹಿಂದೂ ಧರ್ಮ ಜ್ಞಾನದ ಸಂಕೇತ. ನನ್ನ ಧರ್ಮವನ್ನು ಗೌರವಿಸುವ ಜತೆ ಇನ್ನೊಂದು ಧರ್ಮವನ್ನು ಗೌರವಿಸು ಎಂದು ನನಗೆ ಧರ್ಮ ಹೇಳಿಕೊಟ್ಟಿದೆ. ಕಳೆದ 27 ವರ್ಷಗಳಿಂದ ಕುದ್ರೋಳಿ ದೇವಸ್ಥಾನದಲ್ಲಿ ವಿವಿಧ ಹುದ್ದೆಗಳ ಮೂಲಕ ಸಮಾಜದ ಅಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇನೆ. ಇದು ಹಿಂದೂ ಧರ್ಮ ಎಂದು ಅವರು ಹೇಳಿದರು. ಬಿಜೆಪಿಯು ಈವರೆಗೆ ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸಿಲ್ಲ. ಬದಲಾಗಿ ದ್ವೇಷ, ಅಪಪ್ರಚಾರ, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಬುದ್ಧರು. ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ. 33 ವರ್ಷಗಳ ಸೋಲಿನ ಸರಪಳಿಯಿಂದ ಹೊರಬಂದು ಕಾಂಗ್ರೆಸ್‌ ಅದ್ಭುತ ವಿಜಯ ಸಾಧಿಸಲಿದೆ ಎಂದ ದೃಢ ವಿಶ್ವಾಸ ನನ್ನಲ್ಲಿದೆ ಎಂದು ಪದ್ಮರಾಜ್‌ ಪೂಜಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಬಿಜೆಪಿ ಕೊಡಲಿಯೇಟು ನೀಡಿದೆ. ಅದನ್ನು ಮತ್ತೆ ಮರುಸ್ಥಾಪನೆ ಮಾಡಿ ಇಲ್ಲಿಗೆ ಹೂಡಿಕೆ, ಉದ್ದಿಮೆ ಬರುವ ಹಾಗೆ ಮಾಡುವ ಮೂಲಕ ಸ್ಥಳೀಯ ಉದ್ಯೋಗ ಸೃಷ್ಟಿಸಿ, ಯುವಕರು ಅವರ ಹೆತ್ತವರೊಂದಿಗೆ ಇಲ್ಲಿಯೇ ಅನ್ಯೋನ್ಯವಾಗಿ ಬಾಳುವಂತಾಗಬೇಕು ಎಂಬುದು ನನ್ನ ಗುರಿ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಪದ್ಮರಾಜ್‌ ಅವರು ಹೇಳಿದರು. ಕಾಂಗ್ರೆಸ್‌ ಪಕ್ಷದ ಮುಖಂಡರಾದ ಐವನ್‌ ಡಿ’ಸೋಜಾ, ಶಶಿಧರ ಹೆಗ್ಡೆ, ಪ್ರವೀಣ್‌ ಚಂದ್ರ ಆಳ್ವ, ಮಹಾಬಲ ಮಾರ್ಲ, ನೀರಜ್‌ಪಾಲ್‌, ಶುಭೋದಯ ಆಳ್ವ, ವಿಕಾಸ್‌ ಶೆಟ್ಟಿ, ಶಾಹುಲ್‌ ಹಮೀದ್‌, ಜಿತೇಂದ್ರ, ಮುಹಮ್ಮದ್‌, ಸವಾದ್‌ ಸುಳ್ಯ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here