ಮಂಗಳೂರು(ಮಡಿಕೇರಿ): ಅತ್ತೆಯನ್ನು ಸೊಸೆಯೇ ಹತ್ಯೆ ಮಾಡಿದ, ಸಸ್ಪೆನ್ಸ್ ಸಿನಿಮಾ ಮಾದರಿ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ. ಸಹಜ ಸಾವು ಎಂದು ನಂಬಲಾಗಿದ್ದ ಪ್ರಕರಣ ಟ್ವಿಸ್ಟ್ ಪಡೆದು ಕೊಲೆ ಮಾಡಿರುವುದು ಬಯಲಾಗಿ ಆರೋಪಿತೆ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಎಂಬವರನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಆರೋಪದಲ್ಲಿ ಸೊಸೆ ಬಿಂದು (26) ಎಂಬಾಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೂವಮ್ಮ ಅವರ ಪುತ್ರ ಶಿಕ್ಷಕರಾಗಿರುವ ಪ್ರಸನ್ನ, ಪತ್ನಿ ಬಿಂದು ಮತ್ತು ಒಂದು ವರ್ಷದ ಪುತ್ರಿಯೊಂದಿಗೆ ವಾಸವಾಗಿದ್ದರು. ಅತ್ತೆ ಮತ್ತು ಸೊಸೆ ನಡುವೆ ತೀವ್ರ ಮನಸ್ತಾಪ ಇತ್ತು ಎನ್ನಲಾಗಿದೆ. ಏ.15 ರಂದು ಪ್ರಸನ್ನ ಮೌಲ್ಯಮಾಪನಕ್ಕಾಗಿ ಮಡಿಕೇರಿಗೆ ತೆರಳಿದ್ದ ಸಂದರ್ಭ ಪೂವಮ್ಮ ಕುಸಿದು ಬಿದ್ದಿದ್ದಾರೆ ಎಂದು ಬಿಂದು ಕರೆ ಮಾಡಿ ತಿಳಿಸಿದ್ದು, ಬಂದು ನೋಡುವ ವೇಳೆ ಮೃತಪಟ್ಟಿದ್ದರು. ಬಳಿಕ ಸಹಜ ಸಾವು ಎಂದು ಚಿತೆಯಲ್ಲಿರಿಸಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಪೂವಮ್ಮ ಹೃದ್ರೋಗಿಯಾಗಿದ್ದ ಕಾರಣ ಹೆಚ್ಚಿನ ಅನುಮಾನ ಬಂದಿರಲಿಲ್ಲ. ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ಅಂತ್ಯಸಂಸ್ಕಾರದ ಬಳಿಕ ಊಹಾಪೋಹಗಳು ಕೇಳಿ ಬರತೊಡಗಿದವು. ಅನುಮಾನ ಮೂಡಿದ ಬಳಿಕ ಪ್ರಸನ್ನ ಅವರು ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲಾಗಿದ್ದ ರಕ್ತದ ಕಲೆ ಗಳನ್ನು ಜ್ಞಾಪಿಸಿಕೊಂಡಾಗ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಸರಿಯಾಗಿ ಬಿಂದು ನಡವಳಿಕೆಯಲ್ಲೂ ಭಾರೀ ಬದಲಾವಣೆಯಾಗಿದ್ದು ಘಟನೆಗೆ ಪುಷ್ಠಿ ನೀಡಿದೆ.
ಬೆಳಗ್ಗೆ ತಿಂಡಿಗೆ ಅತ್ತೆಯನ್ನು ಕರೆದಾಗ ತಡವಾಗಿ ತಿಂಡಿ ತಿನ್ನುವುದಾಗಿ ಹೇಳಿದ್ದಾರೆ. ಇದರಿಂದ ಅತ್ತೆ ಸೊಸೆ ನಡುವೆ ವಾಗ್ವಾದ ನಡೆದಿದ್ದು, ಸೊಸೆ ಬಿಂದು ಕೈಯಲ್ಲಿದ್ದ ಮೊಬೈಲ್ನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಅತ್ತೆ ಹಾಸಿಗೆ ಮೇಲೆ ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮೃತಪಟ್ಟಿದ್ದನ್ನು ಅರಿತ ಸೊಸೆ ರಕ್ತ ಕಾಣದಂತೆ ಸ್ವಚ್ಛ ಮಾಡಿ, ಹಾಸಿಗೆ ಮೇಲಿದ್ದ ಬಟ್ಟೆಗಳನ್ನೂ ಬದಲಾಯಿಸಿ, ಅತ್ತೆ ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾಳೆ ಎಂದು ಪ್ರಸನ್ನ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದು, ಸೊಸೆ ಬಿಂದು ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.