ಸೈಬರ್ ವಂಚನೆಯಿಂದ 5.17 ಕೋಟಿ ರೂ. ಕಳೆದುಕೊಂಡ ಉದ್ಯಮಿ

ಮಂಗಳೂರು(ಬೆಂಗಳೂರು): ನಗರದಲ್ಲಿ ಸೈಬರ್ ವಂಚನೆಗೆ ಒಳಗಾಗಿ ಅಶೋಕ್ ತಿರುಪಲಪ್ಪ ಎಂಬ ಉದ್ಯಮಿಯೊಬ್ಬರು 5.17 ಕೋಟಿ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಘಟನೆ ಕುರಿತಂತೆ ಅಶೋಕ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ.3ರಂದು ಉದ್ಯಮಿ ಅಶೋಕ್ ಅವರ ವಾಟ್ಸಪ್ ಸಂಖ್ಯೆಗೆ ಅಪರಿಚಿತ ನಂಬರ್ ನಿಂದ ಲಿಂಕೊಂದು ಬರುತ್ತದೆ. ಆದರೆ ಅಶೋಕ್ ಲಿಂಕ್ ಅನ್ನು ತೆರೆದಿರುವುದಿಲ್ಲ. ಸ್ವಲ್ಪ ಸಮಯದಲ್ಲಿ ಬಳಿಕ ಅಶೋಕ್ ಅವರನ್ನು ‘ವೈ-5-ಎವರ್ ಕೋರ್ ಫೈನಾನ್ಸಿಯಲ್ ಲೀಡರ್’ ಎಂಬ ವಾಟ್ಸಪ್ ಗ್ರೂಪ್‍ಗೆ ಆ್ಯಡ್ ಮಾಡಲಾಗುತ್ತದೆ. ಬಳಿಕ ತೇಜಸ್ ಖೋಡೆ, ಗೋಪಾಲ್ ಕಾವಲ್ರೆಡ್ಡಿ, ಕೇರೋಲಿನ್ ಕ್ರುಕ್ಸ್ ಎಂಬ ಅಪರಿಚಿತರು ಅಶೋಕ್ ಅವರಿಗೆ ಕರೆ ಮಾಡಿ ‘ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್‍ಲೋಡ್ ಮಾಡಿ. ಆ ಆ್ಯಪ್‍ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಪ್ರೇರೇಪಿಸುತ್ತಾರೆ. ಇದಾದ ಸ್ವಲ್ಪ ದಿನಗಳ ಬಳಿಕ ಅಶೋಕ್ ಆ್ಯಪ್ ಡೌನ್‍ಲೋಡ್ ಮಾಡುತ್ತಾರೆ. ಬಳಿಕ ಅಶೋಕ್ ತಮ್ಮ ಎಸ್‍ಬಿಐ ಬ್ಯಾಂಕ್ ಖಾತೆಯಿಂದ ಆರೋಪಿಗಳು ಸೂಚಿಸಿದ ಖಾತೆಗೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಲು ಆರಂಭಿಸುತ್ತಾರೆ. ಹೀಗೆ ಬರೊಬ್ಬರಿ 5.17 ಕೋಟಿ ರೂ. ಹಣವನ್ನು ಅಶೋಕ್ ಆರೋಪಿಗಳು ಸೂಚಿಸಿದ ಖಾತೆಗೆ ಹಾಕುತ್ತಾರೆ. ಇದಾದ ಬಳಿಕ ಆರೋಪಿಗಳು ಮತ್ತೆ ಅಶೋಕ್ ಅವರನ್ನು ಸಂಪರ್ಕಿಸಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಹೇಳುತ್ತಾರೆ. ಇದಕ್ಕೊಪ್ಪದ ಅಶೋಕ್, ಈ ಮೊದಲು ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಪಡೆಯಲು ಆ್ಯಪ್‍ನಲ್ಲಿ ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಈಗ ಅಶೋಕ್ ಅವರಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುತ್ತದೆ. ಕೊನೆಗೆ ಅಶೋಕ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಅಶೋಕ್ ನೀಡಿದ ದೂರಿನನ್ವಯ ಸೈಬರ್ ಕ್ರೈಂ ಠಾಣೆಯ ಪೊಲೀಸರು ಫಯರ್ಸ್‌ ಸೆಕ್ಯುರಿಟೀಸ್‌ ಪ್ರೈವೆಟ್‌ ಲಿ., ಈರ್ ಕೋರ್ ಕಂಪೆನಿ ಎಂಬ ಎರಡು ಕಂಪೆನಿಗಳ ಮೇಲೆ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here