ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್ಐಆರ್ ದಾಖಲು ?

ಮಂಗಳೂರು(ಬೆಂಗಳೂರು): ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯನ್ನು ಅತ್ಯಾಚಾರ ಎಸಗಿದ ಆರೋಪ ಪ್ರಕರಣ ಸಂಬಂಧ ಸಿಐಡಿ ಸೆನ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು‌ ಪ್ರಕರಣ ದಾಖಲಾಗಿದೆ.‌ ಈ ಮೂಲಕ ಪ್ರಜ್ವಲ್ ವಿರುದ್ಧ ದಾಖಲಾದ ಮೂರನೇ‌ ಎಫ್ಐಆರ್ ಇದಾಗಿದೆ. ಸಿಆರ್​ಪಿಸಿ 161ರಡಿ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ.‌ ಸದ್ಯದಲ್ಲಿ‌ ಆಕೆಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ, 164ನಡಿ ಹೇಳಿಕೆ ದಾಖಲಿಸಲಾಗುವುದು ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ವರ್ಗಾವಣೆ ಸೋಗಿನಲ್ಲಿ ಮಹಿಳೆಯನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಂತ್ರಸ್ತೆ ದೂರಿದ್ದಾರೆ.

376(2)(N)- ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ, 376(2)(K)- ಪ್ರಭಾವಿ ಸ್ಥಾನದ ವ್ಯಕ್ತಿ, ಸ್ಥಾನ ದುರ್ಬಳಕೆ ಮಾಡಿಕೊಳ್ಳುವುದು, 354(A) – ಲೈಂಗಿಕ ಫೇವರ್ ಪಡೆಯುವುದು, 354(B) – ಮಹಿಳೆಯ ಮೇಲೆ ಹಲ್ಲೆ, ಎಳೆಯುವುದು, 354(C) ಮಹಿಳೆ ಲೈಂಗಿಕ ಕ್ರಿಯೆ ಚಿತ್ರೀಕರಣ, ನೋಡುವುದು, ಪ್ರಸಾರ ಮಾಡುವುದು, 506- ಜೀವ ಬೆದರಿಕೆ ಹಾಕುವುದು ಸೇರಿದಂತೆ ವಿವಿಧ ಸೆಕ್ಷನ್​ಗಳಡಿ‌ ಪ್ರಕರಣ ದಾಖಲಿಸಲಾಗಿದೆ‌ ಎಂದು ಮೂಲಗಳು ತಿಳಿಸಿವೆ. ಕೆ. ಆರ್ ನಗರ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣ ಸಂಬಂಧ ಸಂತ್ರಸ್ತೆಯನ್ನು ಬಸವನಗುಡಿಯಲ್ಲಿ ಇರುವ ಹೆಚ್. ಡಿ ರೇವಣ್ಣ ಮನೆಗೆ ಕರೆತಂದು ಮಹಜರ್ ಮಾಡಿದ್ದಾರೆ. ಸಂತ್ರಸ್ತೆಯೊಂದಿಗೆ ಬಂದ ಎಸ್‌ಐಟಿ ತಂಡ ಸುದೀರ್ಘವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಜತೆಗೆ ಮಹಜರ್ ಪ್ರಕ್ರಿಯೆ ನಡೆಸಿದೆ. ಈಗಾಗಲೇ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿ ಪ್ರಜ್ವಲ್ ಚಲನವಲನದ ಮೇಲೆ ಸದಾ ಕಾಲ ನಿಗಾ ವಹಿಸಿದ್ದಾರೆ. ಮತ್ತೊಂದೆಡೆ ಎಸ್‌ಐಟಿ ಅಧಿಕಾರಿಗಳ ತಂಡವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದೆ.

LEAVE A REPLY

Please enter your comment!
Please enter your name here