ಲೈಂಗಿಕ ಕಿರುಕುಳ-ಪಬ್ಲಿಕ್ ಪ್ರಾಸಿಕ್ಯೂಟರ್ ಬಂಧನ-ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೆ

ಮಂಗಳೂರು(ಬೆಂಗಳೂರು): ‘ಮಹಿಳೆಯೊಬ್ಬರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದ’ ಆರೋಪದಡಿ ನಗರದ 71ನೇ ಸಿಸಿಎಚ್‌ ನ್ಯಾಯಾಲಯದ ‍ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀರಾಮ್ ಅವರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ವಾಸವಿರುವ 32 ವರ್ಷ ವಯಸ್ಸಿನ ಮಹಿಳೆ ಕೃತ್ಯದ ಬಗ್ಗೆ ದೂರು ನೀಡಿದ್ದರು. ಐಪಿಸಿ 354-ಎ (ಲೈಂಗಿಕ ಕಿರುಕುಳ) ಹಾಗೂ ಐಪಿಸಿ 366 (ಮದುವೆ, ಇತ್ಯಾದಿಗೆ ಒತ್ತಾಯಿಸಿ ಮಹಿಳೆಯನ್ನು ಅಪಹರಣ ಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶ್ರೀರಾಮ್‌ನನ್ನು ಬಂಧಿಸಿ, ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನ್ಯಾಯಾಲಯದ ಪ್ರಕರಣವೊಂದರಲ್ಲಿ ಮಹಿಳೆಗೆ ಜಾಮೀನು ಮಂಜೂರಾಗಿತ್ತು. ಜಾಮೀನು ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿದ್ದ ಮಹಿಳೆ, ಜಾಮೀನು ಪ್ರತಿ ಪಡೆಯಲು ಮೇ 9ರಂದು ಮಧ್ಯಾಹ್ನ ಆರೋಪಿಯ ಕಚೇರಿಗೆ ಹೋಗಿದ್ದರೆಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಮೀನು ರದ್ದುಪಡಿಸುವುದಕ್ಕಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡುವುದಾಗಿ ಹೇಳಿದ್ದ ಆರೋಪಿ, ನ್ಯಾಯಾಲಯದ ಪ್ರವೇಶ ದ್ವಾರದ ಬಳಿ ಕಾಯುವಂತೆ ತಿಳಿಸಿದ್ದ. ಅದಕ್ಕೆ ಒಪ್ಪಿ ಮಹಿಳೆ ಕಾಯುತ್ತಿದ್ದರು. ಆಟೊವೊಂದರಲ್ಲಿ ಸ್ಥಳಕ್ಕೆ ಹೋಗಿದ್ದ ಆರೋಪಿ, ಮಹಿಳೆಯನ್ನು ಹತ್ತಿಸಿಕೊಂಡು ಕಾಟನ್‌ಪೇಟೆ ಬಳಿಯ ಲಾಡ್ಜ್‌ವೊಂದರ ಬಳಿ ತೆರಳಿದ್ದ. ಲಾಡ್ಜ್‌ ಒಳಗೆ ಹೋಗಿದ್ದ ಆರೋಪಿ, ಮಹಿಳೆಯನ್ನೂ ಒಳಗೆ ಬರುವಂತೆ ಕರೆದಿದ್ದ. ಆದರೆ, ಮಹಿಳೆ ಒಪ್ಪಿರಲಿಲ್ಲ. ನಿನ್ನ ಪ್ರಕರಣವನ್ನೆಲ್ಲ ಮುಗಿಸಿಕೊಡುತ್ತೇನೆ. ಒಳಗೆ ಬಾ ಎಂದಿದ್ದ. ನಿರಾಕರಿಸಿದ್ದ ಮಹಿಳೆ, ಸಮೀಪದಲ್ಲಿದ್ದ ಹೋಟೆಲ್‌ಗೆ ಹೋಗಿ ಕುಳಿತಿದ್ದರು. ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹೋಟೆಲ್‌ಗೂ ಹೋಗಿದ್ದ ಆರೋಪಿ, ಬೇರೆ ಲಾಡ್ಜ್‌ ಮಾಡುತ್ತೇನೆ. ಬಾ ಎಂಬುದಾಗಿ ಪುನಃ ಒತ್ತಾಯಿಸಿದ್ದ. ಕೆಲ ನಿಮಿಷಗಳ ನಂತರ, ಮಹಿಳೆಯ ಪತಿಯ ಸ್ನೇಹಿತ ಸ್ಥಳಕ್ಕೆ ಬಂದಿದ್ದರು. ಆರೋಪಿಯ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದನ್ನು ನೋಡಿದ್ದ ಆರೋಪಿ, ಸ್ಥಳದಿಂದ ಓಡಲಾರಂಭಿಸಿದ್ದರು. ಸ್ನೇಹಿತ ಹಾಗೂ ಸ್ಥಳೀಯರು, ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದರು. ಬಳಿಕ, ಸ್ಥಳಕ್ಕೆ ಹೋದ ಗಸ್ತು ವಾಹನದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here