ಮಂಗಳೂರು(ಬೆಂಗಳೂರು): ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕೆಎಎಸ್ ಅಧಿಕಾರಿಯೊಬ್ಬರ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚೈತ್ರಾ ಬಿ.ಗೌಡ (35) ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಹೈಕೋರ್ಟ್ನಲ್ಲಿ ಅಡ್ವೋಕೇಟ್ ಆಗಿದ್ದ ಚೈತ್ರಾ ಅವರು ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಯ್ಯ ಲೇಔಟ್ನಲ್ಲಿ ವಾಸವಾಗಿದ್ದರು. ಮಹಿಳೆಯ ಪತಿ ಶಿವಕುಮಾರ್ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ (ಕೆಐಡಿಬಿ) ಅಸಿಸ್ಟಂಟ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಚೈತ್ರಾ, ಪ್ರವೃತ್ತಿಯಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸಾಯಬೇಕೆಂದು ಮೊದಲೇ ತೀರ್ಮಾನಿಸಿದ್ದ ಚೈತ್ರ ಗೌಡ ಮಾರ್ಚ್ 11 ರಂದೇ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ʻʻನಾನು ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಖಿನ್ನತೆಯಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದೆ. ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ನಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ. ನೀವು ಲೈಫ್ ಎಂಜಾಯ್ ಮಾಡಿʼʼ ಎಂದು ಅವರು ಪತಿಯನ್ನುದ್ದೇಶಿಸಿ ಬರೆದಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಚೈತ್ರ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. 2016ರಲ್ಲಿ ಶಿವಕುಮಾರ್ ಚೈತ್ರ ಅವರನ್ನು ಮದುವೆಯಾಗಿದ್ದರು. ಮೃತಳ ಮನೆಯವರು ಚೈತ್ರಾ ಆತ್ಮಹತ್ಯೆಗೆ ಪತಿ ಹೊಣೆ ಎಂದು ಆರೋಪಿಸಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.