ಮಂಗಳೂರು(ಪುತ್ತೂರು): ಬರದ ತೀವ್ರತೆ, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಪುತ್ತೂರಿನ ಜನತೆ ವರ್ಷದ ಮೊದಲ ಮಳೆಯಿಂದ ಸಂತಸಗೊಂಡಿದ್ದಾರೆ. ಬಿರು ಬಿಸಿಲ ಬೇಗೆಯಿಂದ ಒಣಗಿದ ಇಳೆಗೆ ಸುರಿದ ಮಳೆ ತಂಪೆರೆಯುವುದರೊಂದಿಗೆ ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಮಳೆ ಸಿಂಚನದಿಂದ ಜನತೆ ನಿರಾಳರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಏರುತ್ತಿರುವ ಬಿಸಿ, ಮಳೆಯ ಮುನ್ಸೂಚನೆ ನೀಡಿತ್ತಾದರೂ ಮಳೆ ಬಾರದೆ ಜನ ಕಂಗಾಲಾಗಿದ್ದರು. ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಮಳೆಗಾಗಿ ಪ್ರಾರ್ಥನೆಯನ್ನೂ ನೆರವೇರಿಸಲಾಗಿತ್ತು. ಇಂದು ಸಂಜೆಯಾಗುತ್ತಲೇ ಗುಡುಗಿನೊಂದಿಗೆ ವರುಣ ಪುತ್ತೂರಿನತ್ತ ಓರೆನೋಟ ಬೀರಿದ್ದು, ತಂತುರು ಮಳೆಯಾಗುತ್ತಿದೆ. ಬಾ ಮಳೆಯೇ ಬಾ. ಸಮೃದ್ಧಿಯ ಧಾರೆಯ ಹರಿಸಿ ಈ ಇಳೆಯ ತಂಪಾಗಿಸು ಎನ್ನುವ ಜನರ ಪ್ರಾರ್ಥನೆ ಈಡೇರಿಸು ಬಾ.