ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮಾಜಿ ಎಬಿವಿಪಿ ಮುಖಂಡ ಎಸ್ ಆರ್ ಹರೀಶ್ ಆಚಾರ್ಯ ಸ್ವತಂತ್ರ ಸ್ಪರ್ಧೆ

ಮಂಗಳೂರು: ಮಾಜಿ ಎಬಿವಿಪಿ ಮುಖಂಡ, ಸಹಕಾರ ಭಾರತಿ ಸದಸ್ಯ ಮಂಗಳೂರು ವಿ.ವಿ.ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಎಸ್ ಆರ್ ಹರೀಶ್ ಆಚಾರ್ಯ ನೈರುತ್ಯ ಶಿಕ್ಷಕರ ಕ್ಷೇತದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗೆ ಕರಾವಳಿ ಜಿಲ್ಲೆಗಳಿಗೆ ಈ ಹಿಂದಿನಿಂದಲೂ ಕನಿಷ್ಠ ಪ್ರಾತಿನಿಧ್ಯ ಇರುತ್ತಿತ್ತು. ಈ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ.ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಯಲ್ಲ. ನಾನು ಕೇವಲ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಪಕ್ಷಾತೀತವಾಗಿ ಸ್ಪರ್ಧಿಸುವುದಾಗಿ ಹರೀಶ್ ಆಚಾರ್ಯ ತಿಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ಪ್ರಾತಿನಿಧ್ಯವನ್ನು ನೀಡದೆ ನಿರ್ಲಕ್ಷ್ಯ ಮಾಡಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶಿಕ್ಷಕರು ಮತ್ತು ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದುದರಿಂದ ಶಿಕ್ಷಕರ ಮತ್ತು ಪದವೀಧರರ ಸ್ವಾಭಿಮಾನ ಹಾಗೂ ಪ್ರಾತಿನಿಧ್ಯದ ಪ್ರತೀಕವಾಗಿ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆಯಲ್ಲಿ ಶಿಕ್ಷಕ ಸಮುದಾಯ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ ಚುನಾಯಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹರೀಶ್ ಆಚಾರ್ಯ ತಿಳಿಸಿದರು.

ನೈರುತ್ಯ ಶಿಕ್ಷಕರ ಕ್ಷೇತ್ರ ಇತರ ಶಿಕ್ಷಕರ ಕ್ಷೇತ್ರಕ್ಕಿಂತ ವಿಶಿಷ್ಟವಾದುದು. ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕ ಸಮುದಾಯ ಹಲವಾರು ಸಮಸ್ಯೆಗಳಿಂದ ಬಳಲಿ ಸೊರಗುತ್ತಿದೆ.ಈ ಸಮಸ್ಯೆ ಬಹಳ ದೀರ್ಘ ಕಾಲದಿಂದಲೂ ಉಳಿದುಕೊಂಡು ಬಂದಿದೆ. ಶೈಕ್ಷಣಿಕ ಕಾರ್ಯಗಳಲ್ಲದೇ ಸಾರ್ವತ್ರಿಕ ಚುನಾವಣೆ, ಜನಗಣತಿ ಇತ್ಯಾದಿ ಕಾರ್ಯಗಳು ಶಿಕ್ಷಕರ ಜವಾಬ್ದಾರಿಯ ಹೆಗಲನ್ನೇರಿದೆ. ಆದರೆ ಅದಕ್ಕೆ ತಕ್ಕಷ್ಟು ಗೌರವ ಸಿಗದಿರುವುದು ಮಾತ್ರ ವಿಷಾದನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರೂ ಆಗಿದ್ದ ಡಾ. ಎಸ್ ಆರ್ ಹರೀಶ್ ಆಚಾರ್ಯ ತಿಳಿಸಿದರು.ಎಲ್ಲಾ ಶಾಲಾ ಕಾಲೇಜುಗಳ ಶೈಕ್ಷಣಿಕ ಹಾಗೂ ಶಿಕ್ಷಕ ಸಮುದಾಯದ ಧ್ವನಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.ಅಧ್ಯಾಪನ ವೃತ್ತಿ ಅತ್ಯಂತ ಪವಿತ್ರವಾದುದು. ಭವಿಷ್ಯದ ಸುಂದರ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು. ಶಿಕ್ಷಕ ಯಾವತ್ತೂ ಮಾರಾಟದ ಸರಕಲ್ಲ. ಆದರೆ ಶಿಕ್ಷಕರ ಮತವನ್ನು ಹಣ, ಹೆಂಡ ಇತ್ಯಾದಿ ಆಮಿಷಗಳಿಂದ ಕೊಂಡುಕೊಳ್ಳಬಹುದು. ಈ ಮೂಲಕ ಶಿಕ್ಷಕರ ಕ್ಷೇತ್ರದಲ್ಲಿಯೂ ಚುನಾವಣೆಯನ್ನು ನಡೆಸಬಹುದು ಎಂಬ ಮಾನಸಿಕತೆ ಪ್ರತಿನಿಧಿಸುವ ಅಭ್ಯರ್ಥಿಗಳಲ್ಲಿ ಮೂಡಿರುವುದು ಈ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯನ್ನು ತಂದಿದೆ. ಇದು ಶಿಕ್ಷಕ ಸಮುದಾಯದ ಸ್ವಾಭಿಮಾನವನ್ನು ಕೆದಕಿದೆ. ಆದುದರಿಂದ ಈ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಸಮುದಾಯದ ಮಹತ್ವ ಹಾಗೂ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಗೊಂದಲದ ಗೂಡಾಗಿದೆ. ದಿನದಿಂದ ದಿನಕ್ಕೆ ಈ ಕ್ಷೇತ್ರದ ಸಮಸ್ಯೆಗಳು ಹೆಚ್ಚು ಹೆಚ್ಚು ಸಂಕೀರ್ಣತೆಗೊಳ್ಳುತ್ತಿದೆ. ಇದರಿಂದ ಶಿಕ್ಷಕ ಸಮುದಾಯದ ಗೌರವಕ್ಕೆ ಪ್ರತಿನಿತ್ಯ ಧಕ್ಕೆಯಾಗುತ್ತಿದೆ. ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಶಿಕ್ಷಕರನ್ನು ಜೊತೆಯಾಗಿ ಕೊಂಡೊಯ್ಯುವ ಅವಶ್ಯಕತೆ ಇದೆ. ನಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬಹುದೆಂಬ ಭರವಸೆಯಿಂದ ಆಯ್ಕೆ ಮಾಡಿದ ಪ್ರತಿನಿಧಿಗಳು ನಮ್ಮ ಕೈಗೆಟುಕವಂತಿರಬೇಕು. ನಮ್ಮ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವಂತವರಿರಬೇಕು. ಆದುದರಿಂದ ಈ ಬಾರಿ ಬದಲಾವಣೆಯ ಅವಶ್ಯಕತೆ ಇದೆ ಎಂಬ ಕೂಗು ಇದೆ.ಕಳೆದ ಸುಮಾರು20 ವರ್ಷಗಳಿಂದ ಈ ಭಾಗದಲ್ಲಿ ವಿದ್ಯಾರ್ಥಿ ಮುಖಂಡನಾಗಿ, ಅಧ್ಯಾಪಕರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯನಾಗಿಯೂ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕ ಸಮುದಾಯದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ನಿರಂತರ ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ಆದುದರಿಂದ ಶಿಕ್ಷಕ ಬಂಧುಗಳು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿ ಚುನಾಯಿಸುವ ವಿಶ್ವಾಸವಿದೆ ಎಂದವರು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಡಾ.ರಾಜ್ ಮೋಹನ್, ಜ್ಯೋತಿ ರೈ,ನಿತೀಶ್ ಸಾಲಿಯಾನ್,ಜಿತಿನ್ ಜಿ ಜೊ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here