ರಾಜಸ್ಥಾನದ ತಾಮ್ರದ ಗಣಿಯಲ್ಲಿ ಲಿಫ್ಟ್‌ ಕುಸಿತ-ಒಬ್ಬ ಮೃತಪಟ್ಟಿರುವ ಶಂಕೆ, 14 ಜನರ ರಕ್ಷಣೆ

ಮಂಗಳೂರು(ರಾಜಸ್ಥಾನ): ಕೋಲಿಹಾನ್‌ನ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ ಗಣಿಯಲ್ಲಿ ಲಿಫ್ಟ್ ಹಗ್ಗ ಮುರಿದು ಗಣಿಯೊಳಗೆ ಸಿಲುಕಿಗೊಂಡಿದ್ದ 14 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಮೃತಪಟ್ಟಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ(ಮೇ.14) ತಡರಾತ್ರಿ ಘಟನೆ ನಡೆದಿದ್ದು, ವಿಜಿಲೆನ್ಸ್‌ ತಂಡದ 15 ಸಿಬ್ಬಂದಿ ಗಣಿಯಲ್ಲಿ ಸಿಲುಕಿಕೊಂಡಿದ್ದರು. ‘ರಕ್ಷಿಸಲ್ಪಟ್ಟ 14 ಸಿಬ್ಬಂದಿಯನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಒಬ್ಬ ವ್ಯಕ್ತಿಗೆ ಕಂಪನಿಗೆ ಸಂಬಂಧಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಮೃತರಾಗಿರುವ ಶಂಕೆಯಿದೆ’ ಎಂದು ಅವರು ತಿಳಿಸಿದ್ದಾರೆ. ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ಕಾರ್ಮಿಕರೊಂದಿಗೆ ವಿಜಿಲೆನ್ಸ್ ತಂಡವು ಪರಿಶೀಲನೆಗಾಗಿ ಗಣಿ ಒಳಗೆ ಹೋದ ಸಂದರ್ಭ ಘಟನೆ ನಡೆದಿದೆ. ಲಿಫ್ಟ್‌ ಮೂಲಕ ಗಣಿಯಿಂದ ಹೊರಬರುತ್ತಿರುವ ವೇಳೆ ಲಿಫ್ಟ್‌ನ ಶಾಫ್ಟ್‌ ಮುರಿದು ಅಧಿಕಾರಿಗಳು, ಸಿಬ್ಬಂದಿ ಸಿಲುಕಿಕೊಂಡಿದ್ದರು. ಘಟನೆ ತಿಳಿಯುತ್ತಿದ್ದಂತೆ ತಡರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಸುಮಾರು 12 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here