ಮಂಗಳೂರು(ಕೇರಳ): ನಾಲ್ಕು ವರ್ಷ ಪ್ರಾಯದ ಬಾಲಕನ ಕೈ ಬೆರಳಿನ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದ ವೈದ್ಯರು ಆತನ ನಾಲಗೆ ಶಸ್ತ್ರ ಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೋಯಿಕೋಡ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ತನ್ನ ಕೈಯ 6ನೇ ಬೆರಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯಲು ಆ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿತ್ತು.
ಮುಂಜಾನೆ ಮಗುವನ್ನು ಆಪರೇಷನ್ ಥಿಯೇಟರಿಗೆ ಕಳುಹಿಸಿದೆವು. ಆದರೆ ಮಗು ಹೊರಗೆ ಬರುವಾಗ ಕೈಯಲ್ಲಿ ಶಸ್ತ್ರ ಚಿಕಿತ್ಸೆಯ ಯಾವುದೇ ಗುರುತು ಕಾಣಿಸಲಿಲ್ಲ. ಬದಲು ನಾಲಗೆಯ ಅಡಿ ಭಾಗದಲ್ಲಿ ಶಸ್ತ್ರಕ್ರಿಯೆ ಮಾಡಿದ ರೂಪದಲ್ಲಿ ಹತ್ತಿಯನ್ನು ಇಟ್ಟಿರುವುದು ಕಾಣಿಸಿತು ಎಂದು ಮಗುವಿನ ಸಂಬಂಧಿಕರಾದ ಫೈಸಲ್ ಹೇಳಿದ್ದಾರೆ. ಶಸ್ತ್ರಕ್ರಿಯೆ ನಡೆಸಿಲ್ಲವೇ ಎಂದು ಕೇಳಿದಾಗ ಬಾಯಲ್ಲಿ ಶಸ್ತ್ರಕ್ರಿಯೆ ನಡೆಸಿರುವುದು ನೋಡಿಲ್ಲವೇ ಎಂಬ ಉತ್ತರವನ್ನು ವೈದ್ಯರು ನೀಡಿದ್ದಾರೆ. ಆದರೆ ಶಸ್ತ್ರಕ್ರಿಯೆ ನಡೆಸಬೇಕಾದದ್ದು ಬೆರಳಿಗೆ ಬಾಯಿಗಲ್ಲ ಎಂದು ಕುಟುಂಬದವರು ಹೇಳಿದಾಗಲೇ ವೈದ್ಯರಿಗೆ ತಾವು ಮಾಡಿರುವ ತಪ್ಪಿನ ಆರಿವಾಗಿದೆ. ಆದರೆ ನಾಲಗೆಯ ಕೆಳಗಡೆ ಸಣ್ಣದೊಂದು ಮಾಂಸ ತುಂಡು ಕಾಣಿಸಿದ್ದು ಅದನ್ನು ನಾವು ಆಪರೇಷನ್ ಮಾಡಿದ್ದೇವೆ ಎಂದು ವೈದ್ಯರು ಸಮರ್ಥಿಸಿಕೊಂಡಿದ್ದಾರೆ. ಆದರೆ ಕುಟುಂಬದವರು ಪ್ರತಿಭಟಿಸಿದಾಗ ಕೈ ಬೆರಳಿನ ಶಸ್ತ್ರ ಕ್ರಿಯೆಯನ್ನು ಕೂಡ ಆ ಬಳಿಕ ವೈದ್ಯರು ಮಾಡಿದ್ದಾರೆ. ಇದೀಗ ಈ ಪ್ರಕರಣದ ವಿರುದ್ಧ ಕೇರಳ ಸರಕಾರ ಗಂಭೀರವಾಗಿ ಪ್ರತಿಕ್ರಿಯಿಸಿದ್ದು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.