ಮಂಗಳೂರು(ಬೆಂಗಳೂರು): ಯುವಕನೊಬ್ಬ ತನ್ನ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಗೆಳತಿಯನ್ನು ಕೂರಿಸಿಕೊಂಡು ಜಾಲಿ ರೈಡ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವಕ ಪೊಲೀಸರ ವಶದಲ್ಲಿದ್ದೂ ಆತನ ವಾಹನ ಚಾಲನ ಪರವಾನಿಗೆ ರದ್ದು ಪಡಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ.
ಯಲಹಂಕದಿಂದ ಹೆಬ್ಬಾಳದತ್ತ ಸಾಗುವ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಬೈಕ್ ಸವಾರ ಈ ಸ್ಟಂಟ್ ಮಾಡಿದ್ದಾನೆ. ಯುವಕ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದರಿಂದ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರಿಗೆ ತೊಂದರೆಯಾಗಿದೆ. ಸಾರ್ವಜನಿಕರೊಬ್ಬರು ಯುವಕ – ಯುವತಿ ರಸ್ತೆಯಲ್ಲಿ ರೋಮಾನ್ಸ್ ಮಾಡುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಚ್ಚೆತ್ತುಕೊಂಡ ಟ್ರಾಫಿಕ್ ಪೊಲೀಸರು ಆ ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಸಿಲಂಬರಸನ್ (21) ಬಂಧಿತ ಯುವಕ. ಯುವಕ ನಿಯಮ ಮೀರಿ ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿದ್ದು ಮಾತ್ರವಲ್ಲದೇ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ. ಇಬ್ಬರೂ ಹೆಲ್ಮೇಟ್ ಧರಿಸಿರಲಿಲ್ಲ, ಹಾಗೂ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಇತರ ವಾಹನದವರಿಗೂ ತೊಂದರೆ ಉಂಟು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೊ ಗಮನಕ್ಕೆ ಬರುತ್ತಿದ್ದಂತೆ ಬೈಕ್ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಚಾಲನಾ ಪರವಾನಗಿಯನ್ನು ಅಮಾನತು ಮಾಡುವಂತೆ ಸಾರಿಗೆ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.