ಮಂಗಳೂರು: ದೈವ-ದೇವಾಲಯಗಳ ತವರು ಎಂದೇ ಪ್ರಸಿದ್ಧಿ ಪಡೆದಿರುವ ಪುಣ್ಯಭೂಮಿ ತುಳುನಾಡಿನಲ್ಲಿ ಬಹಳಷ್ಟು ದೈವ-ದೇವಾಲಯಗಳಿವೆ. ಪ್ರತಿಯೊಂದು ಕ್ಷೇತ್ರವು ಕೂಡ ತನ್ನದೇ ಆದ ಕಾರಣಿಕ ಶಕ್ತಿ, ವಿಭಿನ್ನ ಬಗೆಯ ಆಚಾರ-ವಿಚಾರಗಳ ಮೂಲಕ ಪ್ರಸಿದ್ಧಿ ಪಡೆದಿವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ವಾರ್ಷಿಕ ಜಾತ್ರೆ, ನೇಮೋತ್ಸವಗಳು ಒಂದೊAದು ಬಗೆಯಲ್ಲಿ ನಡೆಯುತ್ತವೆ. ಆದರೆ ಈ ದೈವಸ್ಥಾನದಲ್ಲಿ ಜಾತ್ರೆಯ ಸಂದರ್ಭದಲ್ಲಿ ನದಿಯಲ್ಲಿ ಮೀನು ಹಿಡಿಯುವುದೇ ವಿಶೇಷ ಆಚರಣೆ. ಅಷ್ಟೇ ಅಲ್ಲ, ಇಲ್ಲಿ ಹಿಡಿದ ಮೀನಿನ ಪದಾರ್ಥವನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುವುದು ಕೂಡ ಮತ್ತೊಂದು ವಿಶೇಷ.
ಈ ವಿಭಿನ್ನ ಆಚರಣೆಯು ಕಂಡುಬರುವುದು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಸಮೀಪದ ಚೇಳಾರಿನ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಉಳ್ಳಾಯ ಕ್ಷೇತ್ರದಲ್ಲಿ. ಈ ಕ್ಷೇತ್ರದ ಸಮೀಪದಲ್ಲೇ ಹರಿಯುವ ನಂದಿನಿ ನದಿಯಲ್ಲಿ ನಡೆಯುವ ಮೀನು ಹಿಡಿಯುವ ಸಂಪ್ರದಾಯ ಬಹಳಷ್ಟು ಪ್ರಸಿದ್ದಿಯನ್ನು ಪಡೆದಿದೆ. ಕ್ಷೇತ್ರವು ನಂದಿನಿ ನದಿಯ ತಟದಲ್ಲಿದ್ದು, ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಮೇ ತಿಂಗಳ ವೃಷಭ ಸಂಕ್ರಮಣದಂದು ನಡೆಯುತ್ತದೆ. ಈ ನದಿಯಲ್ಲಿ ಮೀನು ಹಿಡಿಯುವ ಪದ್ಧತಿ ಹಿಂದಿನಿಂದಲೂ ಬೃಹತ್ ಮಟ್ಟದಲ್ಲಿ ನಡೆಯುತ್ತದೆ.
ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬೆಳಗ್ಗೆಯೇ ಜಾತಿ ಮತ ಭೇದ ಮರೆತು ನಂದಿನಿ ನದಿಯಲ್ಲಿ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗುತ್ತಾರೆ. ಸಂಪ್ರದಾಯದಂತೆ ಮೀನು ಹಿಡಿಯುವುದಕ್ಕೂ ಮೊದಲು ಶ್ರೀ ಕ್ಷೇತ್ರದಲ್ಲಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ನಂತರ ನಂದಿನಿ ನದಿಗೆ ಪ್ರಸಾದ ಹಾಕಲಾಗುತ್ತದೆ. ನದಿ ತಟದಲ್ಲಿ ಮೀನು ಬೇಟೆಗೆಂದು ಬಂದ ಜನ ಒಂದೇ ಸಲ ನದಿಗಿಳಿಯುತ್ತಾರೆ. ಮಧ್ಯಾಹ್ನದವರೆಗೂ ಮೀನು ಹಿಡಿದು, ಹಿಡಿದ ಮೀನನ್ನು ಮನೆಗೆ ತೆಗೆದುಕೊಂಡು ಹೋಗಿ, ಸತ್ತವರಿಗೆ ಬಡಿಸುವ ಕ್ರಮ ಇಲ್ಲಿದೆ. ಇದನ್ನು ಹೆಚ್ಚಿನ ಎಲ್ಲಾ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ. ಏಪ್ರಿಲ್‌ನ ಸಂಕ್ರಮಣದಿಂದ ಮೇ ತಿಂಗಳ ಜಾತ್ರೆಯವರೆಗೆ ಮೀನು ಹಿಡಿಯುವ ಕ್ರಮ ಇಲ್ಲ. ಧಾರ್ಮಿಕ ನಂಬಿಕೆ ಧಿಕ್ಕರಿಸಿ ಇಲ್ಲಿ ಮೀನು ಹಿಡಿದ ಸಂದರ್ಭ ಮೀನಿನ ಬದಲಾಗಿ ನಾಗರ ಹಾವು ಕಂಡು ಬಂದ ಉದಾಹರಣೆಗಳನ್ನು ಹಿರಿಯರು ನೆನಪಿಸಿಕೊಳ್ಳೆತ್ತಾರೆ. ಹಾಗಾಗಿ ಇಲ್ಲಿನ ಜನ ಸಂಪ್ರದಾಯವನ್ನ ಇಂದಿಗೂ ಪಾಲಿಸುತ್ತ ಬರುತ್ತಿದ್ದಾರೆ.
ಇಲ್ಲಿನ ಮೀನನ್ನು ಸಾರು ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯ ದೊರೆತಿದೆ. ಇದನ್ನು ಹೊರತಾಗಿ ಎಲ್ಲೆಡೆ ನಡೆಯುವಂತೆ ಧ್ವಜಾವರೋಹಣ ಜಾತ್ರೆ ಉತ್ಸವ ಇಲ್ಲಿ ನಡೆಯುತ್ತದೆ. ಜಾತಿ, ಧರ್ಮದ ಬೇಧ ಮರೆತು ಹಿಂದೂ, ಮುಸ್ಲಿಂ, ಕ್ರೈಸ್ತರು ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಈ ಮೂಲಕ ತನ್ನ ವಿಭಿನ್ನ ಪರಂಪರೆಯ ಮೂಲಕ ಕ್ಷೇತ್ರವು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.