ಮಂಗಳೂರು(ಕೊಪ್ಪಳ): ಸರಿಯಾಗಿ ಓದಲು ಹಾಗೂ ಬರೆಯಲು ಬಾರದ ಇಲ್ಲಿನ ಸಜ್ಜಿ ಓಣಿಯ ನಿವಾಸಿ 23 ವರ್ಷದ ಪ್ರಭು ಲೋಕರೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 99.52ರಷ್ಟು ಅಂಕ ಪಡೆದು ನ್ಯಾಯಾಲಯದಲ್ಲಿ ಜವಾನನ ಹುದ್ದೆ ಗಿಟ್ಟಿಸಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಕೊಪ್ಪಳದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಪ್ರಭು ವಿದ್ಯಾಭ್ಯಾಸದ ಕುರಿತು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 26ರಂದು ಎಫ್‌ಐಆರ್ ದಾಖಲಾಗಿದೆ.
ಪ್ರಭು ಯಾದಗಿರಿಯ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದಲ್ಲಿ ಜವಾನನಾಗಿ ಇದೇ ವರ್ಷದ ಏಪ್ರಿಲ್ 22ರಂದು ಆಯ್ಕೆಯಾಗಿದ್ದಾನೆ. 7ನೇ ತರಗತಿ ಉತ್ತೀರ್ಣರಾದ ಬಳಿಕ ಯಾವುದೇ ಶಾಲೆಯಲ್ಲಿ ಪ್ರವೇಶ ಪಡೆಯದೆ ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಒಟ್ಟು 625ಕ್ಕೆ 623 ಅಂಕಗಳನ್ನು ಪಡೆದುಕೊಂಡಿದ್ದಾನೆ. ಪ್ರಭು ಇಷ್ಟೊಂದು ಅಂಕಗಳನ್ನು ಪಡೆಯಲು ನಿಜಕ್ಕೂ ಸಮರ್ಥರಾಗಿದ್ದಾರೆಯೇ? ಎಂಬುದು ಈಗ ಪ್ರಶ್ನೆಯಾಗಿದೆ.
ಆತನಿಗೆ ಕನ್ನಡ ಹಾಗೂ ಇಂಗ್ಲಿಷ್ ಓದಲು ಸಾಧ್ಯವಿಲ್ಲ. ಬರೆಯಲೂ ಬರುವುದಿಲ್ಲ ಎನ್ನುವ ನಂಬಲರ್ಹವಾದ ಸ್ಥಿತಿಯಿದೆ. ಇಂಥ ಪರಿಸ್ಥಿತಿಯಲ್ಲಿಯೂ ಅವರು ಇಷ್ಟೊಂದು ಅಂಕಗಳನ್ನು ಪಡೆದಿದ್ದಾರೆ ಎನ್ನುವುದು ಅಘಾತಕಾರಿ ಮಾಹಿತಿಯಾಗಿದೆ. ಇದು ಪೂರ್ಣ ವಿದ್ಯಾರ್ಥಿ ಸಮೂಹಕ್ಕೆ ಮತ್ತು ರಾಜ್ಯಕ್ಕೆ ಮೋಸ ಮಾಡಿದಂತಿದೆ. ಕನಿಷ್ಠ ಜ್ಞಾನವೂ ಇಲ್ಲದ ವಿದ್ಯಾರ್ಥಿಯೊಬ್ಬ ಮೋಸದ ಮೂಲಕ ಅಂಕಗಳನ್ನು ಪಡೆದುಕೊಂಡರೆ ಅರ್ಹ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಇಂಥವರೊಂದಿಗೆ ಸ್ಪರ್ಧೆ ಸಾಧ್ಯವೇ’ ಎಂದು ಎಫ್‌ಐಆರ್‌ನಲ್ಲಿ ಪ್ರಶ್ನಿಸಲಾಗಿದೆ.
ಇದು ಅನೇಕ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಗಂಭೀರವೂ ಆಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಇತರರ ಜೊತೆ ಶಾಮೀಲಾಗಿ ಮೋಸದ ಹಾದಿ ಹುಡುಕಿದಂತೆ ಇದ್ದು, ಈ ಕುರಿತು ವಿವರವಾಗಿ ತನಿಖೆ ನಡೆಸಬೇಕು, ಸರ್ಕಾರಿ ಉದ್ಯೋಗವನ್ನು ವಂಚನೆಯಿಂದ ಪಡೆಯುವ ಹಾದಿಗೆ ಕಡಿವಾಣ ಹಾಕಬೇಕು, ಪ್ರಭು ಬರೆದ ಉತ್ತರ ಪತ್ರಿಕೆಯನ್ನು ಆತನ ಕೈಬರಹಕ್ಕೆ ಹೋಲಿಕೆ ಮಾಡಿ ನೋಡಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.