ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಂಧನಕ್ಕೆ ಸಿದ್ಧತೆ-ಗರ್ಡಾಡಿಯ ಮನೆಯ ಸುತ್ತ ಭಾರಿ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ

ಮಂಗಳೂರು(ಬೆಳ್ತಂಗಡಿ): ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಬೆಳ್ತಂಗಡಿ ಪೊಲೀಸರು ಸಿದ್ಧತೆ ನಡೆಸಿದ್ದು, ಗರ್ಡಾಡಿಯ ಅವರ ಮನೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೇ 22ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸರು ಗರ್ಡಾಡಿಯಲ್ಲಿರುವ ಶಾಸಕ ಹರೀಶ್ ಪೂಂಜ ಅವರ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಕಾರ್ಯಕರ್ತರೂ ಜಮಾಯಿಸುತ್ತಿದ್ದು, ಬಂಧನವನ್ನು ವಿರೋಧಿಸಿದ್ದಾರೆ. ಕೆಲವರು ಫೇಸ್‌ಬುಕ್ ಲೈವ್‌ನಲ್ಲಿ ಬಂದು, ಅಮಾಯಕ ಕಾರ್ಯಕರ್ತನಿಗೆ ಅನ್ಯಾಯವಾದಾಗ ಹೋರಾಟ ನಡೆಸಿದ ಶಾಸಕರನ್ನು ಬಂಧಿಸುವುದಾದರೆ ನಮ್ಮನ್ನೂ ಬಂಧಿಸಿ ಎಂದು ಹೇಳುತ್ತಿದ್ದಾರೆ. ಶಾಸಕರ ಮನೆಯ ರಸ್ತೆಯಲ್ಲಿ ಕಾರ್ಯಕರ್ತರು ಬೈಕ್ ಮತ್ತಿತರ ವಾಹನಗಳನ್ನು ಅಡ್ಡವಿಟ್ಟು, ಪೊಲೀಸರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಪ್ರಮುಖ ಬಿಜೆಪಿ ನಾಯಕರ ಸಹಿತ ಹಲವಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಪ್ರಕರಣಗಳೇನು?: ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಅಕ್ರಮ ಕಲ್ಲು ಕೋರೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ಮೇ 18ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಎಫ್ಐಆರ್ ದಾಖಲಾಗಿತ್ತು. ಮೇ 21ರಂದು ಪ್ರತಿಭಟನೆ ನಡೆದ ದಿನ ಪೊಲೀಸರಿಗೆ ಬೆದರಿಕೆ ಒಡ್ಡಿರುವ ಕುರಿತು ಇನ್ನೊಂದು ಪ್ರಕರಣ ದಾಖಲಾಗಿದೆ.

ಮೊದಲ ಪ್ರಕರಣ: ಶಾಸಕ ಹರೀಶ್ ಪೂಂಜ ಇತರ ಕೆಲವರೊಂದಿಗೆ ಮೇ 18ರಂದು ರಾತ್ರಿ ಬೆಳ್ತಂಗಡಿ ಠಾಣೆಗೆ ಬಂದು, ಆರೋಪಿಯನ್ನು ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುತ್ತಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್‌ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. 57/2024, ಕಲಂ :353, 504 ಐಪಿಸಿನಂತೆ ಪ್ರಕರಣ ದಾಖಲಾಗಿತ್ತು.

2ನೇ ಪ್ರಕರಣ: ಆರೋಪಿ ಹಾಗೂ ರೌಡಿ ಶೀಟರ್ ಆಗಿರುವ ಶಶಿರಾಜ್ ಶೆಟ್ಟಿ ಎಂಬಾತನ ಬಂಧನ ವಿರೋಧಿಸಿ, ಮೇ 20ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ಕಾನೂನುಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮತ್ತು ಇತರರು, ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿರುತ್ತಾರೆ. ಸದ್ರಿ ಪ್ರತಿಭಟನಾ ಸಭೆಯಲ್ಲಿ, ಹರೀಶ್ ಪೂಂಜ, ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ಧನೆಂದು ಹಾಗೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್‌ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ, ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿರುತ್ತಾರೆ. ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 58/2024, ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ.ನಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here