ಉಡುಪಿಯಲ್ಲಿ ಒಂದೇ ಗುಂಪಿನ ಎರಡು ಪಂಗಡಗಳ ನಡುವಿನ ಕಾದಾಟ – ಮೂವರ ಬಂಧನ – ಎಸ್‌ ಪಿ ಡಾ.ಅರುಣ್ 

ಉಡುಪಿ: ನಡು ರಸ್ತೆಯಲ್ಲಿ ಎರಡು ತಂಡಗಳ ನಡುವೆ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ. ಗರುಡ ಗ್ಯಾಂಗ್ ಗೆ ಸಂಬಂಧಿಸಿದ ಆಶೀಕ್, ರಾಕೀಬ್ ಮತ್ತು ಸಕ್ಲಾನ್ ಬಂಧಿತರು.

ಉಡುಪಿ-ಮಣಿಪಾಲ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ.18ರಂದು ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ಕಾಪು ಮೂಲದ ಎರಡು ತಂಡಗಳ ಯುವಕರ ನಡುವೆ ಈ ಜಗಳ ನಡೆದಿದ್ದು, ಇವರ ಮಧ್ಯೆ ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ವಿವಾದವಿತ್ತು ಎನ್ನಲಾಗಿದೆ. ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದಾ ತಲವಾರು, ಕತ್ತಿ, ಡ್ರ್ಯಾಗನ್‌ ಹಿಡಿದು ತಿರುಗಾಡುತ್ತಿದ್ದ ಈ ಗುಂಪಿಗೆ, ರೌಡಿಶೀಟರ್‌ ಆಶಿಕ್‌ ಎಂಬಾತನೇ ಕ್ಯಾಪ್ಟನ್‌ ಆಗಿದ್ದ. ನಾಲ್ಕು ವರ್ಷದ ಹಿಂದೆ ಅಂದಿನ ಎಸ್ಪಿ ಡಾ. ವಿಷ್ಣುವರ್ಧನ್‌ ಈ ತಂಡದ ಹೆಡೆಮುರಿ ಕಟ್ಟಿದ್ದರು. ಅದಾದ ನಂತರ ಈ ತಂಡದ ಒಳಜಗಳ ಹೆಚ್ಚಾಗಿತ್ತು. ಎರಡು ವಾರದ ಹಿಂದೆ ಆಶಿಕ್‌ ಮತ್ತು ಅಲ್ಫಾಝ್‌ ನಡುವೆ ಜಗಳ ನಡೆದಿತ್ತು. ಒಂದೇ ತಂಡ ಆಗಿದ್ದರಿಂದ “ರಾಜಿ ಆಗೋಣ, ಗಲಾಟೆ ಬೇಡ” ಬಾ ಎಂದು ಆಶಿಕ್‌ನನ್ನ ಅಲ್ಫಾಝ್‌ ಟೀಂ ಕರೆಸಿಕೊಂಡಿತ್ತು. ಆದ್ರೆ, ಅಲ್ಫಾಝ್‌ ವಿಷಯ ಗೊತ್ತಿದ್ದ ಆಶಿಕ್‌, ಕುಂಜಿಬೆಟ್ಟಿಗೆ ಬಂದವನೇ ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್‌ನನ್ನ ಮಟ್ಟ ಹಾಕಲು ಅಲ್ಫಾಝ್‌ ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ, ತಲವಾರು ದಾಳಿ ನಡೆಸಲು ಮುಂದಾಗಿದ್ದಾರೆ. ಇಷ್ಟಾಗುತ್ತಲೇ ಆಶಿಕ್‌ ಕಡೆಯವರು ತಮ್ಮ ಸ್ವಿಫ್ಟ್‌ ಕಾರನ್ನ ಶರೀಫ್‌ ಎಂಬಾತನ ಮೇಲೆ ಹರಿಸಿದ್ದಾರೆ. ಈ ಘಟನೆ ಸಂಬಂಧ ಈಗಾಗಲೇ ಉಡುಪಿ ನಗರ ಪೊಲೀಸರು ಆಶಿಕ್‌ ಸಹಿತ ಮೂವರನ್ನ ಅರೆಸ್ಟ್‌ ಮಾಡಿದ್ದಾರೆ.

‘ಜನರು ಅಂದುಕೊಂಡಿರುವ ಹಾಗೆ ಇದು ಗ್ಯಾಂಗ್ ವಾರ್ ಅಲ್ಲ, ಒಂದೇ ಗುಂಪಿನ ಎರಡು ಪಂಗಡಗಳ ನಡುವೆ ನಡೆದಿರುವ ಹೊಡೆದಾಟ.  ಮೇ.20ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ಅದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಹೊಡೆದಾಟದ ಸಮಯದಲ್ಲಿ ಬಳಕೆಯಾದ ಒಂದು ಕಾರು, ಎರಡು ಬೈಕ್ ಮತ್ತು ಚಾಕು, ತಲ್ವಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಅರೋಪಿಗಳು ನಾಪತ್ತೆಯಾಗಿದ್ದು ಆದಷ್ಟು ಬೇಗ ಅವರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ ಪಿ ಡಾ.ಅರುಣ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here