ಮಂಗಳೂರು (ಬೆಳ್ತಂಗಡಿ): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು.
ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು. ಸಚಿವರುಗಳಾದ ಮಹಾದೇವಪ್ರಸಾದ್, ಬೈರತಿ ಸುರೇಶ್, ಶಾಸಕ ಅಶೋಕ್ ರೈ, ಹರೀಶ್ ಕುಮಾರ್, ಮಾಜಿ ಶಾಸಕರುಗಳಾದ ರಮಾನಾಥ ರೈ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪಕ್ಷದ ಮುಖಂಡರುಗಳು ಜೊತೆಗಿದ್ದರು.
ಸಿಎಂ, ಡಿಸಿಎಂ ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಭಕ್ತರ ದೇವರ ದರ್ಶನ ಬಂದ್ ಮಾಡಲಾಗಿತ್ತು. ಒಂದು ಗಂಟೆಗೂ ಅಧಿಕ ಸಮಯದಿಂದ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಸಾವಿರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ಬಂದು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಜೈಶ್ರೀರಾಂ, ಮೋದಿ ಪರ ಘೋಷಣೆ ಕೂಗಿದರು.