ಮಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ಬಳಿಕ ವಿದೇಶದಲ್ಲಿದ್ದುಕೊಂಡೇ ವೀಡಿಯೋ ಮೂಲಕ ಪ್ರತ್ಯಕ್ಷವಾಗಿದ್ದಾರೆ.
ವೀಡಿಯೋದಲ್ಲಿ ಖುದ್ದಾಗಿ ಹೇಳಿಕೆ ನೀಡಿರುವ ಪ್ರಜ್ವಲ್ ರೇವಣ್ಣ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಇದನ್ನು ತಿಳಿದು ಬೇಸರಗೊಂಡು ದೂರ ಉಳಿದಿದ್ದೆ. ನಾನು ವಿದೇಶಕ್ಕೆ ಹೋಗಿದ್ದು ಪ್ರೀ-ಪ್ಲಾನ್. ನನ್ನ ವಿದೇಶ ಪ್ರಯಾಣ ಮೊದಲೇ ನಿಗದಿಯಾಗಿತ್ತು. ಮೇ 31ಕ್ಕೆ ಭಾರತಕ್ಕೆ ಬಂದು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುತ್ತೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಇದೇ ವೇಳೆ ತಾತ ದೇವೇಗೌಡರ ಪತ್ರ ಮತ್ತು ಕುಮಾರಸ್ವಾಮಿಯವರ ಮನವಿ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಜ್ವಲ್, ತಂದೆ, ತಾಯಿ, ತಾತನಿಂದ ಕ್ಷಮೆ ಕೋರ್ತೀನಿ. ಜನತೆಯಲ್ಲೂ, ಜೆಡಿಎಸ್ ಕಾರ್ಯಕರ್ತರಲ್ಲೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.