ಮಂಗಳೂರು: ನಗರದ ಜಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ಅಡಿಟೋರಿಯಂನಲ್ಲಿ ಮೇ.26ರಂದು ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್ ) ವತಿಯಿಂದ ನಡೆದ ‘ಮೀಫ್ ಎಕ್ಸಲೆನ್ಸ್ ಅವಾರ್ಡ್ 2024’ ರಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಉಭಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ, ಇಂಜಿನಿಯರಿಂಗ್, ಪಾರಾ ಮೆಡಿಕಲ್ ಮತ್ತು ನರ್ಸಿಂಗ್ ಸೀಟು, ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮುಖ್ಯ ಅತಿಥಿಯಾಗಿ ರಾಜ್ಯ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಆತೀಕ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದು, 2023-24ನೇ ಶೈಕ್ಷಣಿಕ ಸಾಲಿನ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಪಲಿತಾಂಶ ದಾಖಲಿಸಿದ ಉಭಯ ಜಿಲ್ಲೆಗಳ ಶಾಲಾ ಕಾಲೇಜುಗಳ ಪೈಕಿ ಶೇ.100 ಫಲಿತಾಂಶ ದಾಖಲಿಸಿದ ‘ಆಯಿಶಾ ಹೆಣ್ಣುಮಕ್ಕಳ ಪ್ರೌಢ ಶಾಲೆ ಮತ್ತು ಪ ಪೂ’ ಕಾಲೇಜಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಾಣಿಜ್ಯ ವಿಭಾಗದ ಉಭಯ ಜಿಲ್ಲೆಗಳ ಮೀಫ್ ಸದಸ್ಯತ್ವ ಪಡೆದ ಪ ಪೂ ಕಾಲೇಜುಗಳ ಪೈಕಿ ಶೇ. 96.16% ಅಂಕದೊಂದಿಗೆ ಅಗ್ರಸ್ಥಾನವನ್ನು ಪಡೆದ ಅಫ್ರಿದಾ ಗೆ ಮೀಫ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು. ಹಾಗೆಯೇ ಪಿಯುಸಿಯಲ್ಲಿ ಶೇಕಡ 95 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಫಾತಿಮ ಅಸ್ನ, ಕೆ ಶಹನಾಝ್, ಬಿ.ಕೆ ಅಫ್ರಿನ ಫಾತಿಮ, ಖದೀಜ ನಿಹಾಲ, ಆಮಿನ ಹೈಫ, ಫಾತಿಮ ರಿಫ, ಫಾತಿಮ ಮುರ್ಶಿದಾ ಹಾಗೂ ಕಲಾ ವಿಭಾಗದ ಸೈಫುನ್ನಿಸ ರನ್ನು ‘ಮೀಫ್ ಎಕ್ಸಲೆನ್ಸ್ ಅವಾರ್ಡ್’ ನೀಡಿ ಗೌರವಿಸಲಾಯಿತು.
ಮೀಫ್ ವತಿಯಿಂದ ಉಭಯ ಜಿಲ್ಲೆಗಳ ಮೀಫ್ ಸದಸ್ಯ ಪದವಿಪೂರ್ವ ಕಾಲೇಜುಗಳಲ್ಲಿ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿ, ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ಉಭಯಜಿಲ್ಲೆಗಳ ಕಾಲೇಜುಗಳ ಪೈಕಿ ಆಯಿಶಾ ಹೆಣ್ಣುಮಕ್ಕಳ ಪ ಪೂ ಕಾಲೇಜಿಗೆ ಪ್ರಥಮ ‘ಅತ್ಯುತ್ತಮ ಕಾಲೇಜು ಪುರಸ್ಕಾರ’ ವನ್ನು ನೀಡಲಾಯಿತು.