ಮಂಗಳೂರು(ದೆಹಲಿ): ಕೇಂದ್ರದಲ್ಲಿ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರೀಕ ಸಂಹಿತೆ ಮತ್ತು ಒಂದು ದೇಶ ಒಂದು ಚುನಾವಣೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮೋದಿ ಸರ್ಕಾರವು ಮುಂದಿನ ಅವಧಿಯಲ್ಲೂ ಅಧಿಕಾರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ‘ಒಂದು ದೇಶ ಒಂದು ಚುನಾವಣೆ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂವಿಧಾನ ತಜ್ಞರು ಹಾಗೂ ಕಾನೂನು ತಜ್ಞರಾದ ಕೆ. ಎಂ. ಮುನ್ಶಿ, ರಾಜೇಂದ್ರ ಬಾಬು ಹಾಗೂ ಅಂಬೇಡ್ಕರ್ ಅವರು ಯಾವುದೇ ಧರ್ಮಾಧಾರಿತ ಕಾನೂನುಗಳು ಜಾತ್ಯತೀತ ದೇಶದಲ್ಲಿ ಇರಬಾರದು ಎಂದು ಹೇಳಿದ್ದರು. ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸಿದ್ದರು. ಅವರ ಆಶಯಗಳಿಗೆ ಅನುಗುಣವಾಗಿ ಕಾನೂನು ಜಾರಿಗೆ ತರಬೇಕಿದೆ ಎಂದು ಹೇಳಿದರು. ಅಲ್ಲದೆ ಈ ನೀತಿಗಳನ್ನು ಜಾರಿಗೆ ತರಲು ಸಂಬಂಧಪಟ್ಟ ಎಲ್ಲರ ವಿಶ್ವಾಸ ಗಳಿಸುವುದಾಗಿಯೂ ಅಮಿತ್ ಶಾ ಹೇಳಿದ್ದಾರೆ.
ದೇಶದೆಲ್ಲೆಡೆ ಏಕಕಾಲಕ್ಕೆ ಚುನಾವಣೆ ನಡೆಸುವ ಸಮಯ ಬಂದಿದೆ. ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯುವುದರಿಂದ ವೆಚ್ಚವೂ ತಗ್ಗಲಿದೆ ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಅನ್ನೋದು 1950 ರಿಂದಲೂ ಬಿಜೆಪಿ ಅಜೆಂಡಾ ಆಗಿದೆ. ಇದೀಗ ಬಿಜೆಪಿ ಆಡಳಿತದ ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ. ಈ ಕಾಯ್ದೆಯಿಂದ ಸಾಮಾಜಿಕ, ಕಾನೂನಾತ್ಮಕ ಹಾಗೂ ಧಾರ್ಮಿಕ ಸುಧಾರಣೆ ಸಾಧ್ಯ ಎಂದು ಅಮಿತ್ ಶಾ ಹೇಳಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ಬೇಸಿಗೆ ವೇಳೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಚಳಿಗಾಲದಲ್ಲಿ ನಡೆಸುವ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಈ ಬಗ್ಗೆಯೂ ನಾವು ಚಿಂತಿಸಿಲ್ಲ. ಮುಂದೆ ಪರಾಮರ್ಶೆ ನಡೆಸುತ್ತೇವೆ ಎಂದು ಹೇಳಿದರು.