ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್​ ಪತನ ? -ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ ?

ಮಂಗಳೂರು(ಬೆಂಗಳೂರು): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ. ನಾಗೇಂದ್ರ ಅವರಿಗೆ ಸೂಚಿಸಿದ್ದಾರೆ.

ಹಗರಣ ಸಂಬಂಧ ಗುರುವಾರ (ಮೇ 30) ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆ ನಡೆಸಿದ್ದರು. ಸಭೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಸರ್ಕಾರಕ್ಕೆ ಮುಖಭಂಗವಾಗಬಾರದು ಹೀಗಾಗಿ ಬಿ.ನಾಗೇಂದ್ರ ರಾಜಿನಾಮೆ ನೀಡುವುದು ಒಳಿತು. ತನಿಖೆ ಪೂರ್ಣವಾದ ಬಳಿಕ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ತೀರ್ಮಾನ ಕೈಗೊಂಡರು. ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ. ನಾಗೇಂದ್ರ ಅವರಿಗೆ, ಖುದ್ದು ತಾವೇ ಹೇಳಿಕೆ ನೀಡಿ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ. ಬಿ. ನಾಗೇಂದ್ರ ಅವರು ರಾಜಿನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಈ ಹಿನ್ನೆಲೆ ಸರ್ಕಾರದ ಮೇಲೆ ಒತ್ತಡ ಸೃಷ್ಠಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ. ನಾಗೇಂದ್ರ ಅವರಿಗೆ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದೆ. ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್​ನೋಟ್​ ನಲ್ಲಿ ಸಚಿವರ ಮೌಖಿಕ ಆದೇಶದಂತೆ ಅವ್ಯಹಾರ ನಡೆದಿದೆ ಎಂದು ಚಂದ್ರಶೇಖರ ನಮೂದಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಇತ್ತ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಸಿಬಿಐ ಪ್ರಾದೇಶಿಕ ಕಚೇರಿಗೆ ದೂರು ನೀಡಿದ್ದಾರೆ. ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಅವರ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರು ಸರ್ಕಾರ ಮೇಲೆ ಒತ್ತಡ ಹೇರಿದ್ದರು. ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಕೆಎಸ್​ ಈಶ್ವರಪ್ಪ ರಾಜಿನಾಮೆ ನೀಡಿದ್ದರು. ಅದೇ ರೀತಿಯ ಘಟನೆ ಈಗ ನಡೆದಿದ್ದು, ಸಚಿವ ಬಿ. ನಾಗೇಂದ್ರ ರಾಜಿನಾಮೆಗೆ ಬಿಜೆಪಿ ಮತ್ತು ಜೆಡಿಎಸ್​ ಆಗ್ರಹಿಸಿದ್ದರು. ಒಂದು ವೇಳೆ ರಾಜಿನಾಮೆ ನೀಡದಿದ್ದರೆ ಜೂನ್​ 6 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಕರೆ ನೀಡಿತ್ತು.

LEAVE A REPLY

Please enter your comment!
Please enter your name here