ಮಂಗಳೂರು: ಒಟ್ಟು 7 ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಆರಂಭಗೊಂಡ ಪ್ರಜಾಪ್ರಭುತ್ವದ ಹಬ್ಬ ಮತದಾನ 59 ದಿನಗಳನ್ನು ಪೂರೈಸಿದೆ. ಇದೂವರೆಗೆ 6 ಹಂತದ ಮತದಾನ ಯಶಸ್ವಿಯಾಗಿ ನಡೆದಿದ್ದು ಇಂದು 7ನೇಯ ಕೊನೆಯ ಹಂತದ ಮತದಾನ ನಡೆಯುತ್ತಿದೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವನ್ನು ಒಳಗೊಂಡ ಒಟ್ಟು 57 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಪಂಜಾಬ್ ನ 13 ಲೋಕಸಭಾ ಕ್ಷೇತ್ರ, ಉತ್ತರಪ್ರದೇಶದ 13, ಪಶ್ವಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್ ನ 3, ಕೇಂದ್ರಾಡಳಿತ ಪ್ರದೇಶ ಚಂಡೀಗಢ್ ನ 1 ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಅಲ್ಲದೆ ಒಡಿಶಾ ವಿಧಾನಸಭೆ ಚುನಾವಣೆಯ ಬಾಕಿ ಇರುವ 42 ಕ್ಷೇತ್ರ ಮತ್ತು ಹಿಮಾಚಲ ಪ್ರದೇಶದ 6 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಜೂ.4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.