ಸುರತ್ಕಲ್ ಎನ್‌ಐಟಿಕೆಯಲ್ಲಿ ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ- 112 ಟೇಬಲ್‌, 554 ಸಿಬ್ಬಂದಿ ನಿಯೋಜನೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂ.4ರಂದು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನಡೆಯಲಿದೆ. ಅಂಚೆ ಮತ ಎಣಿಕೆ ಬೆಳಿಗ್ಗೆ 8 ರಿಂದ ಹಾಗೂ ಇವಿಎಂ ಮತ ಎಣಿಕೆ 8.30ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಆರ್ಗವಾಲ್, ಬೆಳಿಗ್ಗೆ 6ರಿಂದ 7 ಗಂಟೆಯ ಒಳಗೆ ಸ್ಟ್ರಾಂಗ್‌ ರೂಂ ತೆರೆದು ಅಂಚೆ ಮತಪೆಟ್ಟಿಗೆ ಹಾಗೂ ಇವಿಎಂಗಳನ್ನು ಮತ ಎಣಿಕೆ ಕೊಠಡಿಗೆ ತರಲಾಗುತ್ತದೆ. ಮೇ 29ರವರೆಗೆ 8,537 ಅಂಚೆ ಮತಗಳು ಬಂದಿವೆ. ಸೇವಾ ಮತದಾರರಿಗೆ ಒಟ್ಟು 536 ಮತಪತ್ರಗಳನ್ನು ಕಳುಹಿಸಲಾಗಿದ್ದು, ಈವರೆಗೆ 231 ಮತಪತ್ರಗಳು ಸ್ವೀಕೃತವಾಗಿವೆ. ಮತ ಎಣಿಕೆ ಆರಂಭಕ್ಕಿಂತ ಒಂದು ಗಂಟೆ ಮುಂಚಿನವರೆಗೂ ಸೇವಾ ಮತದಾರರ ಮತಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಪ್ರತ್ಯೇಕ ಕೊಠಡಿಯಲ್ಲಿ 20 ಟೇಬಲ್‌ಗಳಲ್ಲಿ ಅಂಚೆಮತ ಎಣಿಕೆ ನಡೆಯುತ್ತದೆ. ಇವಿಎಂಗಳ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೊಠಡಿ ನಿಗದಿಪಡಿಸಿದ್ದು, ಒಟ್ಟು 112 ಟೇಬಲ್‌ಗಳಲ್ಲಿ ನಡೆಯಲಿದೆ. ಇದಕ್ಕಾಗಿ 554 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಚುನಾವಣಾ ಆಯೋಗದ ಅಧಿಕೃತ ಗುರುತಿನ ಚೀಟಿ ಇದ್ದವರಿಗೆ ಮೂರು ಹಂತಗಳ ತಪಾಸಣೆಯೊಂದಿಗೆ ಎಣಿಕೆ ಕೇಂದ್ರದೊಳಗೆ ಬಿಡಲಾಗುತ್ತದೆ. ಕೇಂದ್ರದ ಸುತ್ತಲು 100 ಮೀ ಅಂತರದೊಳಗೆ ಯಾವುದೇ ವಾಹನಕ್ಕೆ ಪ್ರವೇಶ ಇಲ್ಲ. ಮತ ಎಣಿಕೆ ಕೇಂದ್ರದ ಸುತ್ತ ಹಾಗೂ ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಪ್ರತಿ ಟೇಬಲ್‌ನಲ್ಲಿ ಸಿಬ್ಬಂದಿ ಮತ್ತು ಏಜೆಂಟರ ನಡುವೆ ಸ್ಟೀಲ್ ಜಾಲರಿ ಹಾಕಲಾಗುತ್ತಿದೆ. ಅಭ್ಯರ್ಥಿಗಳ ಪರ ಏಜೆಂಟರು ಬೆಳಿಗ್ಗೆ 6ರಿಂದ 7 ಗಂಟೆ ಒಳಗಿನ ಅವಧಿಯಲ್ಲಿ ಕೇಂದ್ರದಲ್ಲಿರಬೇಕು ಎಂದು ಹೇಳಿದರು. ಇವಿಎಂ ಮತ ಎಣಿಕೆ ಸುವ್ಯವಸ್ಥಿತವಾಗಿ ನಡೆಯಲು ಎಂಟು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕ, ಸಹಾಯಕ, ಮೈಕ್ರೊ ಆಬ್ಸರ್ವರ್, ಡಿ ಗ್ರೂಪ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಫೋನ್, ಹರಿತವಾದ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಅಥವಾ ಏಜೆಂಟರಿಗೆ  ಪೆನ್, ನೋಟ್‍ಪ್ಯಾಡ್ ಹಾಗೂ 17 ಸಿ ಫಾರಂ ಮಾತ್ರ ಕೊಂಡೊಯ್ಯಲು ಅವಕಾಶವಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆ ಜೂನ್ 3ರಂದು ನಡೆಯುವ ಕಾರಣ ಮತ್ತು 4ಕ್ಕೆ ಲೋಕಸಭೆ ಚುನಾವಣೆಯ ಮತ ಎಣಿಕೆ ಇರುವ ಕಾರಣ ಜೂನ್ 1ರಿಂದ ಜೂನ್ 4ರ ಮಧ್ಯರಾತ್ರಿ 12ರವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ. ಈ ವೇಳೆ ವಿಜಯೋತ್ಸವ ಆಚರಣೆ, ಸಿಡಿಮದ್ದು, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಡಿಸಿ ಹೇಳಿದರು. ಮತ ಎಣಿಕೆ ಮುಗಿದ ನಂತರ ಎಲ್ಲ ಮತಯಂತ್ರಗಳು, ದಾಖಲೆಗಳನ್ನು ಜಿಲ್ಲಾ ಭದ್ರತಾ ಕೊಠಡಿಯಲ್ಲಿ ಠೇವಣಿ ಇಡಲಾಗುತ್ತದೆ. ಚುನಾವಣಾ ವ್ಯಾಜ್ಯದ ಅವಧಿ 45 ದಿನಗಳವರೆಗೆ ಸಂರಕ್ಷಿಸಿ ಇಡಲಾಗುತ್ತದೆ ಎಂದು ತಿಳಿಸಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕೆಗೆ ಸಂಬಂಧಿಸಿ ದೂರು ಸಲ್ಲಿಸಲು ಅಥವಾ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂ.1ರಿಂದ ನಿಯಂತ್ರಣ ಕೊಠಡಿ ತೆರೆಯಲಾಗುತ್ತದೆ. ಸಾರ್ವಜನಿಕರು ಈ ಸಂಬಂಧ 1950 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here