ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸರು ಕಾನೂನು ರೀತಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಯಾರೇ ಕಾನೂನು ಕೈಗೆತ್ತಿಕೊಂಡ್ರೂ ಅದರಲ್ಲಿ ಜಾತಿ ಧರ್ಮ ನೋಡದೆ ಸೂಕ್ತ ಕ್ರಮವನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ. ಬೊಳಿಯಾರಿನಲ್ಲಿ ನಡೆದಿರುವ ಘಟನೆಯನ್ನು ಈಗಾಗಲೇ ತನಿಖೆ ಮಾಡುತ್ತಿದ್ದು ಅದರಲ್ಲೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜಕಾರಣಿಗಳು ಹಾಗೂ ಸರ್ಕಾರ ಕೂಡಾ ಇಂತಹ ವಿಚಾರದಲ್ಲಿ ನ್ಯೂಟ್ರಲ್ ಆಗಿದ್ದು ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಬೇಕು ಎಂದಿದ್ದಾರೆ. ಇಂದು(ಜೂ.10) ಮಂಗಳೂರಿಗೆ ಆಗಮಿಸಿದ್ದ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದು, ನಗರದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಪರಿಪೂರ್ಣವಾಗಿ ರಚಿಸುವ ಬಗ್ಗೆ ಗೃಹ ಸಚಿವರ ಜತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮರಳಿನ ಕೊರತೆಯ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸೋಲಿನ ಬಗ್ಗೆ ಪ್ರಸ್ತಾಪಿಸಿದ ಸಚಿವರು ಸೋಲಾಗಿದ್ದರೂ ಸೋಲಿನ ಅಂತರ ಕಡಿಮೆ ಆಗಿದೆ. ಮತದಾರರು ಕಾಂಗ್ರೆಸ್‌ಗೆ ಯಾಕೆ ಮತ ಹಾಕಿಲ್ಲ ಅನ್ನೋ ಬಗ್ಗೆಯೂ ವಿಶ್ಲೇಷಣೆ ಮಾಡಲಾಗುತ್ತಿದೆ. ಸೋಲಿನ ಕಾರಣದಿಂದ ಸಚಿವರ ತಲೆದಂಡ ಆಗುತ್ತದೆ ಅಂದ್ರೆ ಅದು ಪಕ್ಷದ ಹಿತಕ್ಕಾಗಿ ಆಗುತ್ತದೆ. ಇಲ್ಲಿ ಯಾರೂ ಅನಿವಾರ್ಯ ಅಲ್ಲ ಹಾಗೇ ಬೇಡದವರೂ ಅಲ್ಲ. ಎಲ್ಲರೂ ಪಕ್ಷ ಸಂಘಟನೆಯ ಜವಾಬ್ದಾರಿ ಇರುವವರು. ಆದ್ರೆ ಒಟ್ಟಾರೆ ಫಲಿತಾಂಶದಿಂದ ಮೋದಿ ಅವರಿಗೆ ಇನ್ನಾದ್ರೂ ಒಳ್ಳೆ ಕೆಲಸ ಮಾಡುವ ಪಾಠ ಕಲಿಸಿದೆ ಎಂದು ಗುಂಡೂರಾವ್ ತಿಳಿಸಿದರು.