ಮಂಗಳೂರು/ನವದೆಹಲಿ: ಕೇರಳದ ತ್ರಿಶೂರ್ ಸಂಸದ ಸುರೇಶ್ ಗೋಪಿ ಭಾನುವಾರ ಮೋದಿ 3.0 ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿ ಅಚ್ಚರಿ ಹುಟ್ಟಿಸಿದ್ದಾರೆ.
ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಸುರೇಶ್ ಗೋಪಿ, ನಾನು ಸಂಸದನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ ವಿನಃ, ಸಚಿವ ಸ್ಥಾನಮಾನ ಬೇಡ ಎಂಬುದಾಗಿ ತಿಳಿಸಿದ್ದಾರೆ. ತಕ್ಷಣವೇ ನನ್ನ ರಾಜ್ಯ ಖಾತೆ ಸಚಿವ ಸ್ಥಾನಮಾನ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ತ್ರಿಶ್ಶೂರ್ ಜನತೆಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಸಂಸದನಾಗಿ ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂಬುದು ಜನತೆಗೆ ತಿಳಿದಿದೆ. ನನಗೆ ಸಿನಿಮಾದಲ್ಲಿ ನಟಿಸಬೇಕಾಗಿದೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿದೆ. ಇನ್ನು ಈ ಬಗ್ಗೆ ಪಕ್ಷ ನಿರ್ಧರಿಸಲಿ ಎಂದು ತಿಳಿಸಿದ್ದಾರೆ.
2024ರ ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುರೇಶ್ ಗೋಪಿ, ಒಂದು ವೇಳೆ ನಾನು ಚುನಾವಣೆಯಲ್ಲಿ ಜಯ ಸಾಧಿಸಿದರೆ, ನಾನು ಕೇಂದ್ರ ಸಚಿವನಾಗುತ್ತೇನೆ. ಇದು ಮೋದಿ ಅವರ ಗ್ಯಾರಂಟಿಯಾಗಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಪ್ರಚಾರದಲ್ಲಿ ಸುರೇಶ್ ಗೋಪಿ “ತ್ರಿಶ್ಶೂರ್ ನ ಕೇಂದ್ರ ಸಚಿವ, ಇದು ಮೋದಿ ಗ್ಯಾರಂಟಿ” ಎಂಬ ಸ್ಲೋಗನ್ ಮೊಳಗಿಸಿದ್ದರು. ಇದೀಗ ಚುನಾವಣೆಯಲ್ಲಿ ಗೆದ್ದು, ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಾನು ಸಿನಿಮಾ ಇಂಡಸ್ಟ್ರೀಯನ್ನು ಬಿಡಲಾರೆ, ನಟನೆ ನನ್ನ ಹವ್ಯಾಸವಾಗಿದೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ಸಚಿವ ಸ್ಥಾನ ಬೇಡ ಎಂದು ತಿಳಿಸಿದ್ದಾರೆ. ಆದರೆ ರಾಜ್ಯ ಸಚಿವ ಸ್ಥಾನ ನೀಡುವುದರಿಂದ ಸುರೇಶ್ ಗೋಪಿ ಅಸಮಾಧಾನಗೊಂಡು ಸಚಿವ ಸ್ಥಾನ ತೊರೆಯಲು ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.
ಆದರೆ, ಸಚಿವ ಸುರೇಶ್ ಗೋಪಿ ʼನಾನು ರಾಜಿನಾಮೆ ನೀಡಿಲ್ಲʼ ಎಂದು ಎಕ್ಸ್ ನಲ್ಲಿ ಬರೆದು ಕೊಂಡಿದ್ದಾರೆ. ನಾನು ಮೋದಿ ಸರಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿಯನ್ನು ಹರಡುತ್ತಿದೆ. ಆದರೆ ಇದು ಸಂಪೂರ್ಣ ಸುಳ್ಳು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ದಿ ಮತ್ತು ಸಮೃದ್ದಿಗೆ ಬದ್ದರಾಗಿದ್ದೇವೆ ಎಂದು ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ.