ಮಂಗಳೂರು/ಬೆಂಗಳೂರು: ಪೋಕ್ಸೊ ಕೇಸ್ನಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಂಧಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ವಿಚಾರಣೆಗೆ ಬಿ ಎಸ್ ಯಡಿಯೂರಪ್ಪ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್ ಹೊರಡಿಸಲು ಪೊಲೀಸರು ನಿನ್ನೆ ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ವಾರಂಟ್ ಹೊರಡಿಸುವ ಬಗ್ಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಲಿದೆ. ಒಂದು ಪಕ್ಷ ಕೋರ್ಟ್ ವಾರಂಟ್ ಜಾರಿ ಮಾಡಿದರೆ ಪೊಲೀಸರು ಬಿ ಎಸ್ ಯಡಿಯೂರಪ್ಪನವರನ್ನು ಬಂಧಿಸಲಿದ್ದಾರೆ.
ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಬಿಎಸ್‌ವೈ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕಳೆದ ಮಾರ್ಚ್ ತಿಂಗಳಲ್ಲೇ ದೂರು ನೀಡಿದ್ದರು. ಆದರೆ ಕಳೆದ ತಿಂಗಳು ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಹಿಳೆಯ ದೂರಿಗೆ ಸಂಬಂಧಿಸಿದಂತೆ ಬಿ ಎಸ್ ಯಡಿಯೂರಪ್ಪಗೆ ನೋಟಿಸ್ ಜಾರಿಗೊಳಿಸಿದ್ದ ಪೊಲೀಸರು ನಿನ್ನೆ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅಪಾಯ ಮನಗಂಡ ಬಿಎಸ್ ವೈ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟಿಸ್ ಗೂ ಉತ್ತರ ನೀಡಿರುವ ಬಿಎಸ್‌ವೈ ಸೋಮವಾರ ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.