ಮಂಗಳೂರು (ಬೆಂಗಳೂರು): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈಗ ಮತ್ತೆ ಮೂರು ಡಿಸಿಎಮ್ ನೇಮಕದ ಕೂಗು ಕೇಳಿ ಬಂದಿದೆ.
ಸಚಿವ ಕೆ ಎನ್ ರಾಜಣ್ಣ, ಮೂರು ಡಿಸಿಎಮ್ ನೇಮಕ ಮಾಡುವಂತೆ ನೀಡಿದ ಬಹಿರಂಗ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದು, ಇದಕ್ಕೆ ಹೈಕಮಾಂಡ್ ಸ್ಪಂದಿಸದೆ ಇದ್ದರೂ,ಸದ್ದು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಈಗಾಗಲೇ ಡಿ ಕೆ ಶಿವಕುಮಾರ ಉಪಮುಖ್ಯಮಂತ್ರಿಗಳಾಗಿದ್ದು, ಕಾಂಗ್ರೆಸ್ ಬೆಂಬಲಿಸಿದ ವಿವಿಧ ಸಮುದಾಯಗಳ ಮೂವರು ಹಿರಿಯ ಶಾಸಕರನ್ನು ಉಪಮುಖ್ಯಮಂತ್ರಿ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವಂತೆ, ಕಾಂಗ್ರೆಸ್ ಹೈಕಮಾಂಡ್ ಇನ್ನು ಮೂವರು ಉಪಮುಖ್ಯಮಂತ್ರಿ ಮಾಡಲು ಒಪ್ಪಿಗೆ ನೀಡಿದರೆ, ಪರಿಶಿಷ್ಟ ಜಾತಿಯಿಂದ ಗ್ರಹ ಸಚಿವ ಜಿ ಪರಮೇಶ್ವರ. ಮುಸ್ಲಿಂ ಸಮುದಾಯದಿಂದ ಅಲ್ಪ ಸಂಖ್ಯಾತರ ಸಚಿವ ಜಿ ಜೆಡ್ ಜಮೀರ್ ಅಹ್ಮದ್ ಖಾನ್, ಲಿಂಗಾಯತ ಸಮುದಾಯದಿಂದ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್, ಪರಿಶಿಷ್ಟ ಪಂಗಡ ಸಮುದಾಯದಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೆಸರು ಕೇಳಿ ಬರುತ್ತಿದೆ.