ಲೋಕಸಭೆ ಸ್ಪೀಕರ್ ಸ್ಥಾನ – ವಿಪಕ್ಷದಿಂದ ಕಾಂಗ್ರೆಸ್‌ನ ಕೆ ಸುರೇಶ್, ಎನ್‌ಡಿಎಯಿಂದ ಓಂ ಬಿರ್ಲಾ ಕಣಕ್ಕೆ – ನಾಳೆ ಮತದಾನ

ಮಂಗಳೂರು(ದೆಹಲಿ): ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದಿಂದ ಕಾಂಗ್ರೆಸ್‌ ಸಂಸದ ಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎ ಜೊತೆ ಮಾತುಕತೆ ಮುರಿದುಬಿದ್ದ ನಂತರ ಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಕಳೆದ ಎನ್‌ಡಿಎ ಸರ್ಕಾರದಲ್ಲಿ ಸ್ಫೀಕರ್‌ ಆಗಿದ್ದ ಬಿಜೆಪಿ ಸಂಸದ ಓಂ ಬಿರ್ಲಾ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. ಸ್ಪೀಕರ್‌ ಚುನಾವಣೆಯು ಜೂ.26ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಸ್ಪೀಕರ್‌ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲು ಇಂಡಿಯಾ ಒಕ್ಕೂಟದ ಸದಸ್ಯರು ನಿರಾಕರಿಸಿದರು. ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್‌ ಅವರ ಕಚೇರಿಗೆ ಮಾತುಕತೆಗೆ ಆಗಮಿಸಿದ್ದ ಕಾಂಗ್ರೆಸ್‌ನ ಕೆ ಸಿ ವೇಣುಗೋಪಾಲ್‌, ಡಿಎಂಕೆಯ ಟಿ ಆರ್‌ ಬಾಲು ಒಮ್ಮತಕ್ಕೆ ಬೆಂಬಲ ವ್ಯಕ್ತಪಡಿಸಲು ನಿರಾಕರಿಸಿ ಕಚೇರಿಯಿಂದ ಹೊರನಡೆದರು.

ಭರ್ತೃಹರಿ ಮಹತಾಬ್‌ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವುದರ ಮೂಲಕ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಒಳಗೊಂಡಂತೆ ವಿಪಕ್ಷಗಳು ನಿನ್ನೆ ವಿರೋಧ ವ್ಯಕ್ತಪಡಿಸಿದ್ದವು. ನಿಯಮಾನುಸಾರ ಅತೀ ಹೆಚ್ಚು ಅವಧಿಗೆ 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಸಂಸದ ಕೆ ಸುರೇಶ್‌ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಬೇಕಿತ್ತೆಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಹಿರಿತನದ ಆಧಾರದ ಮೇಲೆ ಸುರೇಶ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆ ಮಾಡಬೇಕಿತ್ತು.

ಬಿಜೆಪಿ ನೇತೃತ್ವದ ಸರ್ಕಾರ ಸ್ಪೀಕರ್‌ ಹುದ್ದೆಯ ನಿಯಮಾವಳಿಯನ್ನು ಉಲ್ಲಂಘಿಸಿ ರಾಜಕೀಯಕರಣಗೊಳಿಸಿರುವುದನ್ನು ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್ ಮತ್ತು ಕೆ ಸಿ ವೇಣುಗೋಪಾಲ್ ಖಂಡಸಿದ್ದಾರೆ.

ವಿಪಕ್ಷಗಳ ಆರೋಪವನ್ನು ಅಲ್ಲಗಳೆದಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ಮಹತಾಬ್‌ ಅವರು ಸತತವಾಗಿ 7 ಬಾರಿ ಆಯ್ಕೆಯಾದ ಕಾರಣ ನಿಯಮಾನುಸಾರ ಅವರನ್ನು ಆಯ್ಕೆ ಮಾಡಲಾಗಿದೆ. ಸುರೇಶ್ ಅವರು 1998 ಹಾಗೂ 2004ರಲ್ಲಿ ಸೋಲು ಅನುಭವಿಸಿದ್ದರು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here