ಮಂಗಳೂರು(ದೆಹಲಿ): ದ.ಕ.ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದೆಹಲಿಯಲ್ಲಿ ಕೇಂದ್ರದ ಹಲವು ಸಚಿವರುಗಳನ್ನು ಭೇಟಿಯಾಗಿ ದ.ಕ.ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮತ್ತು ಕ್ಷೇತ್ರದ ಬೇಡಿಕೆಗಳು, ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದ್ದಾರೆ.
ದ.ಕ.ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿ ಸಂಸದರಾಗಿ ಚುನಾಯಿತರಾಗಿರುವ ಮಾಜಿ ಸೈನಿಕರೂ ಆಗಿರುವ ಕ್ಯಾ|ಬ್ರಿಜೇಶ್ ಚೌಟ ಅವರು ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಈಗಾಗಲೇ ದೆಹಲಿಗೆ ತೆರಳಿದವರು ಕೇಂದ್ರದ ವಿವಿಧ ಖಾತೆಗಳ ಸಚಿವರನ್ನು,ರಾಜ್ಯ ಸಚಿವರನ್ನು ಭೇಟಿಯಾಗಿ ಕ್ಷೇತ್ರದ ಸಮಸ್ಯೆಗಳು ಮತ್ತು ಜನರ ಬೇಡಿಕೆಗಳ ಕುರಿತು ಪ್ರಸ್ತಾಪಿಸಿ, ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು, ಬೃಹತ್ ಕೈಗಾರಿಕೆಗಳ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಎಸ್.ಪುರಿ, ಬಂದರು,ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಕೇಂದ್ರ ರೈಲ್ವೇಖಾತೆ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು. ನವಮಂಗಳೂರು ಬಂದರು ಅಭಿವೃದ್ಧಿ ದೃಷ್ಟಿಯಿಂದ ಇರುವ ಸಾಧ್ಯತೆಗಳು ಹಾಗೂ ಸಾಗರ್‌ಮಾಲಾ ಯೋಜನೆಯಡಿ ಲಕ್ಷದ್ವೀಪಕ್ಕೆ ತೆರಳುವ ಹಡಗುಗಳಿಗೆ ಮೀಸಲಾದ ಜೆಟ್ಟಿ ಮತ್ತು ಕ್ರೂಸ್ ಟರ್ಮಿನಲ್ ನಿರ್ಮಾಣದ ಕುರಿತು, ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ, ರೈಲ್ವೇ ಯೋಜನೆಗಳ ಕುರಿತು ಮತ್ತು ಜಿಲ್ಲೆಯ ಇತರ ಸಮಸ್ಯೆಗಳು, ಬೇಡಿಕೆಗಳ ಕುರಿತು ಸಂಸದ ಕ್ಯಾ|ಬ್ರಿಜೇಶ್ ಚೌಟರು ಸಚಿವರುಗಳೊಂದಿಗೆ ಚರ್ಚಿಸಿ, ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದರು ಎಂದು ವರದಿಯಾಗಿದೆ.