ಬುರ್ಖಾ ಧರಿಸಿ ಬಂದು ಫೈನಾನ್ಸ್‌ನಿಂದ ಲೂಟಿ ಯತ್ನ – ಮೂವರು ಆರೋಪಿಗಳ ಬಂಧನ

ಮಂಗಳೂರು (ಬಜ್ಪೆ): ಫೈನಾನ್ಸೊಂದಕ್ಕೆ ಬುರ್ಖಾ ಧರಿಸಿಕೊಂಡು ಬಂದು ಮಹಿಳೆ ಮೇಲೆ ಆ್ಯಸಿಡ್‌ ಹಾಕಿ ಚಿನ್ನಾಭರಣ ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಜು.13ರಂದು ಬಂಧಿಸಿದ್ದಾರೆ.

ಬಜಪೆ ಶಾಂತಿಗುಡ್ಡೆಯ ಪ್ರೀತೇಶ್‌ ಯಾನೆ ಪ್ರೀತು (31), ಸುರತ್ಕಲ್‌ ಕೋಡಿಕರೆಯ ಧನರಾಜ್‌ ಯಾನೆ ಧನು (30) ಹಾಗೂ ಬಾಳ ಕುಂಬಳಕೆರೆಯ ಕುಸುಮಾಕರ ಯಾನೆ ಅಣ್ಣು (37) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಇನೋವಾ ಕಾರು, ಸ್ವಿಫ್ಟ್ ಕಾರು ಮತ್ತು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.

ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ ಕುನ್ಹಾ ಅವರಿಗೆ ಸೇರಿದ ಬಜಪೆ ಫೈನಾನ್ಸ್‌ಗೆ ಜು.4ರಂದು ಸಂಜೆ ಬುರ್ಖಾ ಧರಿಸಿ ಬಂದಿದ್ದ ಮೂವರು ಚಿನ್ನಾಭರಣ ಸುಲಿಗೆ ಮಾಡಲು ಪ್ರಯತ್ನಿಸಿದ್ದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಂಧಿತ ಪ್ರೀತೇಶ್‌ ವಿರುದ್ಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ 2 ಹಾಗೂ ಬಜಪೆ ಪೊಲೀಸ್‌ ಠಾಣೆಯಲ್ಲಿ ಒಂದು ಕಳವು ಪ್ರಕರಣ, ಧನರಾಜ್‌ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 2 ಹಾಗೂ ಮೂಡುಬಿದರೆ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ, ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಒಂದು ಜೀವ ಬೆದರಿಕೆ ಪ್ರಕರಣ, ಕುಸುಮಾಕರನ ವಿರುದ್ಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ 2 ಹಾಗೂ ಬಜಪೆ ಪೊಲೀಸ್‌ ಠಾಣೆಯಲ್ಲಿ 1 ಕಳವು ಪ್ರಕರಣಗಳು ದಾಖಲಾಗಿರುತ್ತದೆ.

 

LEAVE A REPLY

Please enter your comment!
Please enter your name here