ಮಂಗಳೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಶಾಸಕ ಡಾ.ವೈ.ಭರತ್ ಶೆಟ್ಟಿ ವಿರುದ್ದ ಎಫ್ ಐ ಆರ್ ದಾಖಲಾದ ಹಿನ್ನಲೆಯಲ್ಲಿ ದ.ಕ ಬಿಜೆಪಿ ವತಿಯಿಂದ ನಗರದ ಕಾವೂರಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ವಿಧಾನ ಸಭಾ ವಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಸುನಿಲ್ ಕುಮಾರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿ ಶಾಸಕರು ಭಾಗಿಯಾಗಿದ್ದರು. ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ಭರತ್ ಶೆಟ್ಟಿ ವಿರುದ್ದ ಕಾಂಗ್ರೆಸ್ ಕಾರ್ಪೋರೇಟರ್ ಅನಿಲ್ ಕುಮಾರ್ ಕಾವೂರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಹಿಂದೂ ಧರ್ಮ ಉಳಿದರೆ ದೇಶ ಉಳಿಯುತ್ತದೆ, ವಿಧಾನ ಸೌಧದಲ್ಲಿ ಪಾಕಿಸ್ಥಾನ ಜೈ ಅಂದವರಿಗೆ ಪಟ್ಟ ಕಟ್ಟಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 36 ಹಿಂದೂಗಳ ಕೊಲೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಂಮರ ಒಲೈಕೆ ಮಾಡುತ್ತಾರೆ.ಕಾಂಗ್ರೆಸ್ ನವರು ನರೇಂದ್ರ ಮೋದಿಯನ್ನು ಹತ್ಯೆ ಮಾಡಬೇಕು ಅನ್ನುವವರಿಗೆ ಅಧಿಕಾರ ಕಟ್ಟಿದ್ದಾರೆ. ನಮ್ಮ ಮೈಯಲ್ಲಿ ಹರಿಯುತ್ತಿರುವುದು ಭಾರತ ಮಾತೆಯ ರಕ್ತ. ಪಾಕಿಸ್ಥಾನ ಜೈ ಅನ್ನುವವರಿಗೆ ಮಂಗಳೂರಿನಲ್ಲಿ ಇರಲು ಬಿಡಲ್ಲ ಎಂದರು.
ಮೈಸೂರಿನಲ್ಲಿ ಮೂಡ ವಿಚಾರದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿ ದಿಕ್ಕಾರ ಕೂಗಿದ್ದೇನೆ. ಈ ಹೋರಾಟ ಪೋಲಿಸ್ ವಿರುದ್ದ ಅಲ್ಲ. ಪೋಲಿಸರ ಹಿಂದೆ ಕಾಣದ ಕೈಗಳು ಬಿಜೆಪಿ ನಾಯಕರ ಮೇಲೆ ಕೇಸ್ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರನ್ನು ಭಯ ಪಡಿಸುವ ಹುನ್ನಾರ ನಡೆಯುತ್ತಿದೆ. ಪೋಲಿಸರಿಗೆ ಭಯ ಪಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ರಾಜ್ಯ ಸರ್ಕಾರ ಐಸಿಯುನಲ್ಲಿದೆ. ಇದು ಐಸಿಸಿ ಸರ್ಕಾರದ ಹಾಗೆ ಇದೆ, ಜಾಸ್ತಿ ದಿನ ಈ ಸರ್ಕಾರ ಇರಲ್ಲ. ಮಂಗಳೂರಿನಲ್ಲಿ ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ. ಅದ್ದರಿಂದ ಇಂತಹಾ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿ ಹೋರಾಟದ ಮುಖಾಂತರ ಅಧಿಕಾರಕ್ಕೆ ಬಂದಿದೆಯೇ ಹೊರತು, ಮಜಾ ಮಾಡಿ ಬಂದ ಪಕ್ಷ ಅಲ್ಲ. ಕಾಂಗ್ರೆಸ್ ಲೂಟಿಕೋರ ಪಾರ್ಟಿಯಾಗಿದೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಸುನಿಲ್ ಕುಮಾರ್ ರಾಹುಲ್ ಗಾಂಧಿ ಯಾವುದೇ ಜನಪರ ಭಾಷಣ ಮಾಡಿಲ್ಲ. ಹಿಂದೂಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಹಿಂದೂಗಳಿಗೆ ಅಪಮಾನ ಮಾಡಿದ್ದರು. ಅವರ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಶಾಸಕ ಭರತ್ ಶೆಟ್ಟಿ ಮಾತನಾಡಿದ್ದು, ದಕ್ಷಿಣ ಕನ್ನಡದಲ್ಲಿ ಬಿಜೆಪಿ ನಾಯಕರ ಮೇಲೆ ನಿರಂತರ ಸುಳ್ಳು ಕೇಸ್ ಹಾಕಲಾಗುತ್ತಿದೆ. ಶಾಸಕ ಭರತ್ ಶೆಟ್ಟಿ ಅವರೊಂದಿಗೆ ನಾವಿದ್ದೇವೆ. ಹಿಂದೂಗಳಿಗೆ ನೋವಾದಾಗ ಕಾಂಗ್ರೆಸ್ ನ ಒಬ್ಬನೇ ಒಬ್ಬ ಮಾತನಾಡಿಲ್ಲ. ನಿಮ್ಮ ವಿರುದ್ದ ಪ್ರತಿಭಟನೆ ಮಾಡಿದ್ರೆ ಸಿಟ್ಟು ಬರುತ್ತೆ. ಹಿಂದೂಗಳಿಗೆ ಅವಮಾನವಾದಾಗ, ಹಿಂದೂಗಳ ಹತ್ಯೆ ನಡೆದಾಗ ಕಾಂಗ್ರೆಸಿಗರು ಮಾತನಾಡಿಲ್ಲ. ಆದರೆ ರಾಹುಲ್ ಗಾಂಧಿ ವಿರುದ್ದ ಪ್ರತಿಭಟನೆ ಮಾಡಿದ್ರೆ ಇವರಿಗೆ ಉರಿಯುತ್ತದೆ. ಹಿಂದೂಗಳಲ್ಲಿ ಕ್ಷಮೆ ಕೇಳದಿದ್ದರೆ ರಾಹುಲ್ ಗಾಂಧಿ ಮಂಗಳೂರಿಗೆ ಬಂದಾಗ ಕಪ್ಪುಬಾವುಟ ಪ್ರದರ್ಶನ ಮಾಡಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ಅವರು ರಾಹುಲ್ ಗಾಂಧಿಗೆ ಯಾರಾದ್ರು ಹೊಡೆಯಬೇಕಿತ್ತು ಅಂದಿದ್ಧಕ್ಕೆ ಇಷ್ಟು ಉರಿಬಿದ್ದಿದೆ. ಇನ್ನು ಯಾರಾದ್ರು ಹೊಡೆದು ಬಿಟ್ರೆ ಇಲ್ಲಿಯ ಕಾಂಗ್ರೆಸಿಗರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಏಕಾಂಗಿಯಲ್ಲ ಅವರೊಂದಿಗೆ ನಾವಿದ್ದೇವೆ. ಶಾಸಕ ವೇದವ್ಯಾಸ್ ಕಾಮತ್ ವಿರುದ್ದ 2, ಹರೀಶ್ ಪೂಂಜಾ ವಿರುದ್ಧ 2 ಕೇಸ್ ಹಾಕಲಾಗಿದೆ. ಜಿಲ್ಲೆಯ ಇತರ ಶಾಸಕರ ವಿರುದ್ದ ಕೇಸ್ ಹಾಕಲು ಕಾಯುತ್ತಿದ್ದಾರೆ.
ಇನ್ನು ಯಾವುದೇ ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹಾಕಿದರೆ ಅವರು ಒಬ್ಬರೆ ಬರಲ್ಲ,ಬದಲಾಗಿ ಸಾವಿರಾರು ಕಾರ್ಯಕರ್ತರೊಂದಿಗೆ ಬರುತ್ತೇವೆ. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ನೀವೆ ಹೊಣೆಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಈ ನಡುವೆ ಶಾಸಕ ಭರತ್ ಶೆಟ್ಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದಿದ್ದಾರೆ.