ಷೇರು ವ್ಯವಹಾರದ ನಕಲಿ ಆ್ಯಪ್ ನಲ್ಲಿ ಅಸಲಿ ಹೂಡಿಕೆ – ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದು 1.5 ಕೋಟಿ

ಮಂಗಳೂರು: ಷೇರು ವ್ಯವಹಾರದ ನೆಪದಲ್ಲಿ ಆನ್‌ಲೈನ್‌ನಲ್ಲಿ ₹ 1.50 ಕೋಟಿ ವಂಚಿಸಿದ ಬಗ್ಗೆ ನಗರದ ವ್ಯಕ್ತಿಯೊಬ್ಬರು ಸೆನ್‌ ಅಪರಾಧ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ.

ಫೇಸ್ ಬುಕ್‌ನಲ್ಲಿ ‘ಜೆಫ್ರೀಸ್‌ ವೆಲ್ತ್‌ ಮಲ್ಟಿಪ್ಲಿಕೇಷನ್‌ ಪ್ಲ್ಯಾನ್’ ಎಂಬ ಪೋಸ್ಟ್‌ ನೋಡಿ ಅದರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ನನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದೆ. ನಂತರ ಮೇ 3ರಂದು ಯಾರೋ ಅಪರಿಚಿತ ವ್ಯಕ್ತಿ ‘ಜೆಫ್ರೀಸ್‌ ವೆಲ್ತ್‌ ಮಲ್ಟಿಪ್ಲಿಕೇಷನ್‌ ಸೆಂಟರ್‌ 223’ ಎಂಬ ಗುಂಪಿಗೆ ಸೇರಿಸಿದ್ದ. ಆ ಗುಂಪಿನಲ್ಲಿರುವ ಇತರ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ ಸ್ಕ್ರೀನ್ ಶಾಟ್‌ಗಳನ್ನು ಹಾಕುತ್ತಿದ್ದರು. ಅವುಗಳನ್ನು ನೋಡಿ ಪ್ರೇರೇಪಿತನಾಗಿದ್ದೆ. ಆ ಗುಂಪಿನ ಅಡ್ಮಿನ್ ಜೂಲಿಯಾ ಸ್ಟರ್ನ್ ಎಂಬುವರು ಕಳುಹಿಸಿದ್ದ ‘ಪ್ರೊಫೆಷನಲ್ ಗ್ಲೋಬಲ್ ಸ್ಟಾಕ್‌ ಟ್ರೇಡಿಂಗ್ ಪ್ಲ್ಯಾಟ್‌ಫಾರ್ಮ್‌’ ಸೈಟ್‌ನ ಕೊಂಡಿ ಬಳಸಿ, ಸ್ಟಾಕ್ ಖರೀದಿಸಲು ವಿಐಪಿ ಟ್ರೇಡಿಂಗ್‌ ಖಾತೆಯನ್ನು ತೆರೆದಿದ್ದೆ. ಮೇ 28ರಿಂದ ಜೂನ್ 28ರ ನಡುವೆ ಹಂತ ಹಂತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಲ್ಲಿಕಟ್ಟೆ ಶಾಖೆಯ ಖಾತೆಯಿಂದ ₹73 ಲಕ್ಷ ಮತ್ತು ಗುರುಪುರ ವ್ಯವಸಾಯ ಸಹಕಾರಿ ಸಂಘದ ವಾಮಂಜೂರು ಶಾಖೆಯ ಖಾತೆಯಿಂದ ₹77 ಲಕ್ಷ ಸೇರಿ ಒಟ್ಟು ₹ 1.50 ಕೋಟಿಯನ್ನು ಅಪರಿಚಿತ ವ್ಯಕ್ತಿ ಸೂಚಿಸಿದ್ದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇನೆ.

ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಾಗದಿದ್ದಾಗ ಗುಂಪಿನ ಚೀಫ್ ಅಡ್ಮಿನ್ ಆರ್ಥುರೊ ಪಡಿಲ್ಲ ಎಂಬುವರನ್ನು ವಾಟ್ಸ್ಆಪ್ ಕರೆ ಮೂಲಕ ಸಂಪರ್ಕಿಸಲು ಪ್ರಯತ್ನಿಸಿ ವಿಫಲವಾಗಿದ್ದೆ. ಬಳಿಕ ಜೂಲಿಯಾ ಸ್ಟರ್ನ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ‌ಈ ವಂಚನೆ ಬಗ್ಗೆ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ನಲ್ಲಿ ಜುಲೈ 5ರಂದು ದೂರು ಸಲ್ಲಿಸಿದ್ದೇನೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here