ಭಾರಿ ಮಳೆ – ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿಯಲ್ಲಿ ಗುರುವಾರ ನೀರಿನ ಹರಿವು ಅಪಾಯದ ಮಟ್ಟವನ್ನು ತಲುಪಿದೆ.

ಉಪ್ಪಿನಂಗಡಿಯ ಬಳಿ ನೇತ್ರಾವತಿ ನೀರು ಹರಿವಿಗೆ 29 ಮೀಟರ್ ಅಪಾಯದ ಮಟ್ಟವಾಗಿದ್ದು, ಇಲ್ಲಿ ನೀರು 28.7 ಮೀಟರ್‌ವರೆಗೆ ತಲುಪಿದೆ. ಶಂಭೂರು ಎಎಂಆರ್ ಅಣೆಕಟ್ಟೆ ಬಳಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 18.9 ಮೀಟರ್ ವರೆಗೂ ನೀರಿನ ಮಟ್ಟ ತಲುಪಿದೆ. ಈ ಅಣೆಕಟ್ಟೆಯ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. 7 ಮೀ ಎತ್ತರದಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ತುಂಬೆ ಅಣೆಕಟ್ಟೆಯಲ್ಲಿ ಸದ್ಯಕ್ಕೆ 6 ಮೀ ವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತದೆ.‌ ಈ ಅಣೆಕಟ್ಟೆಯ ಎಲ್ಲಾ 30 ಗೇಟ್‌ಗಳನ್ನು ತೆರೆಯಲಾಗಿದ್ದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಗುರುವಾರ ಬೆಳಿಗ್ಗೆಯಿಂದಲೂ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯ ಇತರ ಪ್ರಮುಖ ನದಿಗಳಾದ ಕುಮಾರಧಾರಾ, ಫಲ್ಗುಣಿ, ನಂದಿನಿ, ಶಾಂಭವಿ ನದಿಗಲಕೂ ತುಂಬಿ ಹರಿಯುತ್ತಿವೆ. ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆ ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಲಾಯಿಲದಲ್ಲಿ 17.35 ಸೆಂ.ಮೀ, ಮೆಲಂತಬೆಟ್ಟುವಿನಲ್ಲಿ 16.40, ಬಳೆಂಜದಲ್ಲಿ 16.35, ಕಲ್ಮಂಜದಲ್ಲಿ 15.95, ಪಟ್ರಮೆಯಲ್ಲಿ 15.45, ಮುಂಡಾಜೆಯಲ್ಲಿ 15.00, ಮಲವಂತಿಗೆಯಲ್ಲಿ 14.50, ಉಜಿರೆಯಲ್ಲಿ 14.30, ಅರಸಿನಮಕ್ಕಿಯಲ್ಲಿ 13.95, ಹಾಗೂ ಬಂಟ್ವಾಳ ತಾಲ್ಲೂಕಿನ ಮಂಚಿಯಲ್ಲಿ 14.00 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here