ಮಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಮೃತಪಟ್ಟಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೃತ ಮಹಿಳೆಯ ಪತಿ, ಆತನ ಮೊದಲ ಪತ್ನಿ, ಅತ್ತೆ ಮತ್ತು ಮೊದಲನೇ ಪತ್ನಿಯ ಅಣ್ಣನಿಗೆ ಆರು ವರ್ಷ ಕಠಿಣ ಸಜೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಭದ್ರಾವತಿ ತಾಲೂಕು ತಿಪ್ಲಾಪುರ ಗ್ರಾಮದ ಮಜೀದ್ ಅಹಮ್ಮದ್ (35), ಆತನ ಮೊದಲನೇ ಪತ್ನಿ ಸಪೂರ ಅಂಜುಂ(28), ತಾಯಿ ಮಮ್ತಾಜ್ ಬಾನು (60) ಮತ್ತು ಸಪೂರಳ ಅಣ್ಣ ಭದ್ರಾವತಿ ಹಳೆನಗರದ ಕಾಜಿ ಮೊಹಲ್ಲ 4 ನೇ ಕ್ರಾಸ್ ನಿವಾಸಿ ಜಮೀರ್ ಅಹಮ್ಮದ್ (30) ಶಿಕ್ಷೆಗೊಳಗಾದ ಆರೋಪಿಗಳು. ಚೆನ್ನಗಿರಿ ನಿವಾಸಿ ರೇಷ್ಮಾ ಬಾನು(26)ವನ್ನು ಮಜೀದ್ ಅಹಮ್ಮದ್ 2ನೇ ವಿವಾಹವಾಗಿದ್ದನು.
ಬಳಿಕ ಇವರು ಕಾಟಿಪಳ್ಳ 9ನೇ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈತನು ಸುರತ್ಕಲ್‌ನಲ್ಲಿ ಗ್ಯಾರೇಜ್ ನಡೆಸುತ್ತಿದ್ದನು. ತಾಯಿ ಹಾಗೂ ಇತರರೊಂದಿಗೆ ಸೇರಿ ರೇಷ್ಮಾ ಬಾನುವಿಗೆ ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ. ಅದರಂತೆ 2019ರ ಎ.28 ರಂದು ಮಧ್ಯಾಹ್ನ ರೇಷ್ಮಾ ಕೋಣೆಯಲ್ಲಿ ಮಲಗಿದ್ದಾಗ ಆರೋಪಿ ಮಜೀದ್ ಗ್ಯಾರೇಜ್‌ನಿಂದ ಬಂದು ದಿಂಬುವಿನಿಂದ ಉಸಿರುಗಟ್ಟಿಸಿ ಅಸ್ವಸ್ಥಗೊಳಿಸಿದ್ದ. ಬಳಿಕ ನಾಲ್ವರು ಸೇರಿ ಚೂಡಿದಾರ ಶಾಲ್‌ನಿಂದ ಕುತ್ತಿಗೆಗೆ ಸುತ್ತಿ ಫ್ಯಾನ್‌ಗೆ ನೇಣಿಗೆ ಹಾಕಿದ್ದಾರೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರು ವರ್ಷ ಕಠಿಣ ಸಜೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.