ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ಎಲೆ ರೋಗ ಸಮಸ್ಯೆ ಕುರಿತು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಲೋಕಸಭೆಯ ಗಮನಸೆಳೆದಿದ್ದು, ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಳದಿ ರೋಗ ತಡೆಗೆ ಸಂಬಂಧಿಸಿ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಹಣಕಾಸು ನೆರವನ್ನೂ ನೀಡಬೇಕು ಎಂದು ಲೋಕಸಭೆಗೆ ಮನವಿ ಮಾಡಿದ ಸಂಸದ ಚೌಟ, ರೈತರ ಈ ಸಮಸ್ಯೆಗೆ ತುರ್ತು ಕ್ರಮದ ಅಗತ್ಯವಿದೆ.ದ.ಕ.ದಲ್ಲಿ ಶೇ.50ರಷ್ಟು ಕೃಷಿ ಭೂಮಿಯಲ್ಲಿ ಅಡಕೆ ಬೆಳೆಯಲಾಗುತ್ತದೆ. ಹೀಗಾಗಿ, ಈ ಸಮಸ್ಯೆಗೆ ಪರಿಹಾರ ಅತ್ಯಗತ್ಯವಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 1.74 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, 84,157 ಹೆಕ್ಟೇರ್ ಭೂಮಿಯಲ್ಲಿ ಅಡಕೆ ಬೆಳೆಯಲಾಗಿದೆ. ಆದರೆ ಫೈಟೋಪ್ಲಾಸ್ಮಾದಿಂದ ಉಂಟಾಗಿರುವ ಹಳದಿ ಎಲೆ ರೋಗದಿಂದಾಗಿ ಭಾರೀ ಪ್ರಮಾಣದ ಬೆಳೆ ನಾಶವಾಗಿದ್ದು, ರೈತರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ.
16000 ಹೆಕ್ಟೇರ್ ಕೃಷಿ ಪ್ರದೇಶದ ಅಡಿಕೆ ನಾಶವಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆ ವರದಿ ಮಾಡಿದ್ದು, 6000 ಕೃಷಿಕರು ಹಳದಿ ಎಲೆ ರೋಗದ ಬಗ್ಗೆ ಸಮಸ್ಯೆ ತೋಡಿಕೊಂಡಿದ್ದಾರೆ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಅವರು ಸದನಕ್ಕೆ ತಿಳಿಸಿದ್ದಾರೆ.