ನಾಲ್ಕು ಅಂತಸ್ತಿನ ಕಟ್ಟಡ ಕುಸಿತ -ಓರ್ವ ಮೃತ್ಯು, ಇಬ್ಬರ ರಕ್ಷಣೆ

ಮಂಗಳೂರು (ಮುಂಬೈ): ನವಿ ಮುಂಬೈನ ಬೇಲಾಪುರ ಪ್ರದೇಶದಲ್ಲಿ ಇಂದು (ಜು.27ರ) ಮುಂಜಾನೆ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವ ಇನ್ನಿಬ್ಬರನ್ನು ಪತ್ತೆ ಮಾಡಲು ಶೋಧ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತನನ್ನು ಮೊಹಮ್ಮದ್ ಮಿರಾಜ್ ಎಂದು ಗುರುತಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜು.27ರ ಮುಂಜಾನೆ 4.50ಕ್ಕೆ ಘಟನೆ ಸಂಭವಿಸಿದೆ. ಈವರೆಗೆ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. 13 ವಸತಿ ಘಟಕಗಳು ಮತ್ತು ಮೂರು ಅಂಗಡಿಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಕಟ್ಟಡವು 10 ವರ್ಷ ಹಳೆಯದು ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ 13 ಮಕ್ಕಳು ಸೇರಿದಂತೆ 52 ನಿವಾಸಿಗಳನ್ನು ಕಟ್ಟಡದಿಂದ ಸ್ಥಳಾಂತರಿಸಿದ್ದರು.ಅವಶೇಷಗಳಡಿಯಲ್ಲಿ ಸಿಲುಕಿದ್ದ ಲಾಲ್ ಮೊಹಮ್ಮದ್  ಮತ್ತು ರುಖ್ಸಾನಾ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನವಿ ಮುಂಬೈ ಮಹಾನಗರ ಪಾಲಿಕೆ (ಎನ್‌ಎಂಎಂಸಿ) ಆಯುಕ್ತ ಕೈಲಾಸ್ ಶಿಂಧೆ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಕ್ಕಾಗಿ ಶ್ವಾನ ದಳವನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಎನ್‌ಎಂಎಂಸಿ ತನಿಖೆ ನಡೆಸಲಿದೆ ಎಂದು ಶಿಂಧೆ ಹೇಳಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ದೆಹಲಿಗೆ ತೆರಳಿದ್ದಾರೆ. ಈ ನಡುವೆ ಅವರು ನವಿ ಮುಂಬೈ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದ್ದು, ರಕ್ಷಿಸಲ್ಪಟ್ಟ ಗಾಯಾಳುಗಳು ಮತ್ತು ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದಾರೆ ಎಂದು ಥಾಣೆ ಜಿಲ್ಲಾಡಳಿತದ ಅಧಿಕೃತ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here