ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಾರದೆಂದು ಮುಡಾ ಚರ್ಚೆಗೆ ಅವಕಾಶ ನಿರಾಕರಣೆ – ಯು.ಟಿ ಖಾದರ್

ಮಂಗಳೂರು: ವಿಧಾನಸಭೆ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾಗುತ್ತದೆಯೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟುಹಾಕುವುದು ಇಷ್ಟವಿಲ್ಲ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ ಖಾದರ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನಾರನೇ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಿಲ್ಲ ಎಂಬ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿದ ನಿಲುವಳಿ ಸೂಚನೆಗೆ, ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆ ನಿಯಮ 62(7)ರ ಪ್ರಕಾರ ‘ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿ ಇರಬಾರದು ಎಂದು ಹೇಳುತ್ತದೆ ಎಂದರು. ವಾಲ್ಮೀಕಿ ಹಗರಣದ ಕುರಿತು ನಾಲ್ಕು ದಿನ ಚರ್ಚೆ ನಡೆಸಿದ್ದೇವೆ ಎಂದು ವಿವರಿಸಿದರು. ಐದನೇ ದಿನದಲ್ಲಿ ಮುಡಾ ಹಗರಣವನ್ನು ತರಲಾಯಿತು. ನಿಯಮಗಳ ಪ್ರಕಾರ, ಮುಡಾ ಕುರಿತು ಚರ್ಚೆಗೆ ಅನುಮತಿ ಇಲ್ಲ. ಸ್ಪೀಕರ್ ಕರ್ನಾಟಕ ವಿಧಾನಸಭೆಯ ನಿಯಮಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು, ಸದಸ್ಯರ ವಿಶ್ಲೇಷಣೆಯ ಮೇಲೆ ಅಲ್ಲ.

ವಿಧಾನಸಭಾ ಅಧಿವೇಶನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಶಾಸಕರಿಗೆ ತುಳುವಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟ ಯು ಟಿ ಖಾದರ್ ಅವರನ್ನು ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಂಗಳೂರಿನಲ್ಲಿ ಸನ್ಮಾನಿಸಿದರು. ಖಾದರ್ ಅವರನ್ನು ಶಾಲು ಹೊದಿಸಿ, ಪುಸ್ತಕ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರೋಹಿತ್ ಉಳ್ಳಾಲ್, ಜಿಲ್ಲಾ ಮಾಹಿತಿ ಅಧಿಕಾರಿ ಬಿ ಎ ಖಾದರ್ ಶಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here