ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕ ಸಂಭ್ರಮವನ್ನು ಪಾಲಿಕೆ ಸಭಾಂಗಣದಲ್ಲಿ ಆಚರಣೆ ಮಾಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರೂ ಸುಖವಾಗಿರಬೇಕು ಎಂದು ಬಯಸುವ ದೇಶ ಭಾರತ. ಆದರೆ ನಮ್ಮ ಮೇಲೆ ನಿರಂತರವಾಗಿ ಪರಕೀಯರ ದಾಳಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಯೋಧರು ತಾಯ್ನಾಡಿಗಾಗಿ ಪ್ರಾಣ ಅರ್ಪಿಸಿದರೆ ಅವರ ಕುಟುಂಬಕ್ಕೆ ನಮ್ಮ ಯೋಧ’ ಎಂಬ ಹೆಸರಿನಲ್ಲಿ ತಲಾ 5 ಲಕ್ಷ ನಗದು ನೀಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.ಬ್ರಿಗೇಡಿಯರ್ ಐ ನಾಣಪ್ಪ ರೈ ಮಾತನಾಡಿ, ಸಾವು ಬದುಕು ನಮ್ಮ ಕೈಯಲ್ಲಿಲ್ಲ. ನಾನು ನಾಲ್ಕು ಬಾರಿ ಸತ್ತು ಬದುಕಿದ್ದೇನೆ ಎಂದು ಐ.ಎನ್ ರೈ ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಿಗೆ ಗೌರವ ಮತ್ತು ಕುಟುಂಬಸ್ಥರಿಗೆ ಸಹಾಯಧನ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮೃತರಾದ ಲೆಫ್ಟಿನೆಂಟ್ ಮುರಳೀಧರ ಅವರ ಪತ್ನಿ ಉಷಾಕಿರಣ ಮತ್ತು ಲೆಫ್ಟಿನೆಂಟ್ ಹರೀಶ್ ಕುಮಾರ್ ಅವರ ಪತ್ನಿ ಗೀತಾ ತಲಾ 5 ಲಕ್ಷದ ಚೆಕ್ ವಿತರಿಸಲಾಯಿತು. ಉಪಮೇಯರ್ ಸುನಿತಾ, ಮಹಾನಗರ ಪಾಲಿಕೆ ಆಯುಕ್ತ ಆನಂದ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಉಪಸ್ಥಿತರಿದ್ದರು.