ವಯನಾಡು ಭೂಕುಸಿತ- ಚಾಮರಾಜನಗರದ 2 ಕುಟುಂಬ ನಾಪತ್ತೆ

ಮಂಗಳೂರು (ಚಾಮರಾಜನಗರ): ಕೇರಳದ ವಯನಾಡು ಜಿಲ್ಲೆಯ ಚೂರಲ್​ಮಲನಲ್ಲಿ ಗುಡ್ಡ ಕುಸಿದಿದ್ದು, ಭಾರೀ ಸಾವು-ನೋವು ಸಂಭವಿಸಿದೆ. ಈ ದುರಂತದಲ್ಲಿ ಚಾಮರಾಜನಗರದ ದಂಪತಿ ನಾಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಚೂರಲ್​ಮಲನಲ್ಲಿ ಕೆಲಸ ಮಾಡಿಕೊಂಡಿದ್ದ ಚಾಮರಾಜನಗರದ ಸೋಮವಾರಪೇಟೆಯ ದಂಪತಿ ರತ್ನಮ್ಮ ಹಾಗೂ ರಾಜೇಂದ್ರ ನಾಪತ್ತೆಯಾಗಿದ್ದಾರೆ. ಮಧ್ಯರಾತ್ರಿ ದುರಂತ ಸಂಭವಿಸಿದ ಬಳಿಕ ಚಾಮರಾಜನಗರದಲ್ಲಿರುವ ಕುಟುಂಬಸ್ಥರು, ರತ್ನಮ್ಮ ಹಾಗೂ ರಾಜೇಂದ್ರ ದಂಪತಿಗೆ ಕರೆ ಮಾಡಿದ್ದಾರೆ. ಆದರೆ ದಂಪತಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ಮುಂಡಕೈನಲ್ಲಿ ಚಾಮರಾಜನಗರದ ಮತ್ತೊಂದು ಕುಟುಂಬ ನಾಪತ್ತೆಯಾಗಿದೆ. ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿರುವ ಝಾನ್ಸಿರಾಣಿ ಅವರು ವಯನಾಡು ಜಿಲ್ಲೆಯ ಮುಂಡಕೈ ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಅದೇ ಸ್ಥಳದಲ್ಲೇ ಗುಡ್ಡ ಕುಸಿದಿದ್ದು, ಝಾನ್ಸಿರಾಣಿ ಮತ್ತು ಎರಡುವರೆ ವರ್ಷದ ಮಗು ನಿಹಾಲ್ ಕಾಣೆಯಾಗಿದ್ದಾರೆ.


ಇನ್ನು ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವಯನಾಡಿನ ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕರ್ನಾಟಕದವರು ಯಾರಾದರೂ ದುರಂತದಲ್ಲಿ ಸಿಲುಕಿದ್ದಾರ ಎಂಬ ಮಾಹಿತಿ ಕೇಳಿದ್ದೇವೆ. ಈಗಾಗಲೇ ವಯನಾಡುಗೆ ಗುಂಡ್ಲುಪೇಟೆಯಿಂದ ಎರಡು ರೆಸ್ಕ್ಯೂ ತಂಡವನ್ನು ಕಳಿಸಲಾಗಿದೆ. ರೆಸ್ಕ್ಯೂ ತಂಡದ ಜತೆ ಗುಂಡ್ಲುಪೇಟೆ ಪೊಲೀಸರು ಸಹ ತೆರಳಿದ್ದಾರೆ. ಗುಂಡ್ಲುಪೇಟೆ ಹಾಗೂ ಚಾಮರಾಜನಗರದವರು ಯಾರಾದರೂ ವಯನಾಡಿನಲ್ಲಿ ಸಿಲುಕಿದ್ದಾರ ಎಂಬ ಮಾಹಿತಿ ಕಲೆ ಹಾಕುತ್ತಿದ್ದು, 08226223160 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here