ವಯನಾಡು ಭೂ ಕುಸಿತ – ಸಾವಿನ ಸಂಖ್ಯೆ 93ಕ್ಕೆ ಏರಿಕೆ – ಮುಂದುವರಿದ ರಕ್ಷಣಾ ಕಾರ್ಯ

ಮಂಗಳೂರು (ವಯನಾಡ್‌): ದೇವರನಾಡು ಕೇರಳ ಮತ್ತೊಮ್ಮೆ ಭಾರಿ ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದು, ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ  ಮೃತಪಟ್ಟವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

ಈ ದುರಂತದ ಹಿನ್ನಲೆಯಲ್ಲಿ ರಾಜ್ಯ ಸರಕಾರ ಜು.30 ಮತ್ತು 31ರಂದು ಶೋಕಾಚರಣೆ ನಡೆಸಲಿದೆ. ರಾಜ್ಯದ ಎಲ್ಲಾ ಕಡೆ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಡಲಿದ್ದು, ಎಲ್ಲಾ ಸರಕಾರಿ ಕಾರ್ಯಕ್ರಮ ಮತ್ತು ಆಚರಣೆಗಳನ್ನು ಮುಂದೂಡಿದೆ.

ವಯನಾಡ್‌ ನ ಮಾಜಿ ಸಂಸದ, ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ತಮ್ಮ ಸಹೋದರಿ,ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರೊಂದಿಗೆ ವಯನಾಡಿಗೆ ನಾಳೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಇದೀಗ ಎಲ್ಲಿ ನೋಡಿದರೂ ಮಣ್ಣಿನ ರಾಶಿಯೇ ಕಂಡು ಬರುತ್ತಿದ್ದು, ರಸ್ತೆ, ಸೇತುವೆ, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ  ಸರ್ಕಾರಿ ಸಂಸ್ಥೆ ಸಿಬ್ಬಂದಿಗಳು, ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು 43 ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸಜ್ಜುಗೊಳಿಸಲಾಗಿದೆ.  ಈ ಪ್ರದೇಶದಲ್ಲಿ ಸೇತುವೆ ಕುಸಿದಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಸರ್ಕಾರಿ ಮೂಲಗಳ ಪ್ರಕಾರ, ಈವರೆಗೆ ಗುಡ್ಡಗಾಡು ಪ್ರದೇಶಗಳಿಂದ 250 ಜನರನ್ನು ರಕ್ಷಿಸಲಾಗಿದೆ.


ಮಂಗಳವಾರ ಬೆಳಗಿನ ಜಾವ 2ರಿಂದ4 ಗಂಟೆಯ ನಡುವೆ ಸಂಭವಿಸಿದ ಭೂಕುಸಿತದಿಂದ ಮುಂಡಕೈ ಮತ್ತು ಚೂರಲ್‌ಮಾಲಾ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಕುಸಿದ ಸೇತುವೆ, ಕೊಚ್ಚಿ ಹೋದ ರಸ್ತೆ ಮುಂಡಕೈಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಚೂರಲ್‌ಮಾಲಾದಲ್ಲಿ ಒಟ್ಟು 250 ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಮುಂಡಕೈ, ಚೂರಲ್‌ಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರಿಗೂ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ಪರಿಸ್ಥಿತಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ.

ಘಟನೆಗೆ ಸಂಬಂಧ ಪಟ್ಟಂತೆ ವಯನಾಡ್‌ ಮಾಜಿ ಸಂಸದ ರಾಹುಲ್ ಗಾಂಧಿ ತೀವ್ರ ಸಂತಾಪ ಸೂಚಿಸಿದ್ದಾರೆ. ವಯನಾಡಿನ ಮೆಪ್ಪಡಿ ಬಳಿ ಸಂಭವಿಸಿದ ಭಾರೀ ಭೂಕುಸಿತದಿಂದ ನಾನು ತೀವ್ರ ನೊಂದಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಸಿಲುಕಿಕೊಂಡವರನ್ನು ಶೀಘ್ರದಲ್ಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಕೇಂದ್ರ ಸಚಿವರೊಂದಿಗೆ ಮಾತನಾಡಿ ವಯನಾಡಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲಾ ಏಜೆನ್ಸಿಗಳು ಕೈಜೋಡಿಸಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯ ಸಚಿವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ . ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ ಜತೆಗೆ ಸೇನೆ ರಕ್ಷಣಾ ಕಾರ್ಯದಲ್ಲಿ  ತೊಡಗಿದೆ ಎಂದು ಹೇಳಿದ್ದಾರೆ. ಘಟನಾ ಸ್ಥಳದ ಭೀಕರತೆಯ ಕಥೆಯನ್ನು ಹೇಳುವ ಕೆಲವೊಂದು ಚಿತ್ರಗಳು ಇಲ್ಲಿದೆ.

LEAVE A REPLY

Please enter your comment!
Please enter your name here