ಮನೆ ನಿವೇಶನ ಹಸ್ತಾಂತರ ಪ್ರಕ್ರಿಯೆಗೆ ಅನಗತ್ಯ ವಿಳಂಬ -ಮನಪಾ ವಿರುದ್ದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ  ಮನೆ ನಿವೇಶನ ಹಸ್ತಾಂತರ ಪ್ರಕ್ರಿಯೆಗೆ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.

ಪಾಲಿಕೆ ವ್ಯಾಪ್ತಿಯ ಕುಡುಪು ಗ್ರಾಮದ ಸರ್ವೆ ನಂಬ್ರ 85/1 ರಲ್ಲಿ ಸುಮಾರು 8.94 ಎಕ್ರೆ ವಿಸ್ತೀರ್ಣದ ಭೂಮಿಯನ್ನು ಕುದ್ಮಲ್‌ ರಂಗರಾಯರ ಶಿಷ್ಯ ವೆಂಕೋಬರಾವ್‌ 1930ರ ಕಾಲಘಟ್ಟದಲ್ಲಿ ಕೊರಗ ಸಮುದಾಯದ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ದಾನ ನೀಡಿರುತ್ತಾರೆ. ಆದರೆ ಸರಕಾರ ಸರಿ ಸುಮಾರು 100 ವರ್ಷದ ದೀರ್ಘ ಅವಧಿಯಲ್ಲಿ ಕುದ್ಮಲ್‌ ರಂಗರಾಯರ ಕನಸನ್ನು ನನಸು ಮಾಡುವ ಉದ್ದೇಶದಿಂದ ಕೊರಗ ಸಮುದಾಯಕ್ಕೆ ಭೂಮಿಯನ್ನು ವಿತರಿಸಿರುವುದಿಲ್ಲ. ಕೊರಗಜ್ಜ ಸೇವಾ ಟ್ರಸ್ಟ್‌ ನ ನಿರಂತರ ಪ್ರಯತ್ನ ದಿಂದಾಗಿ 2018ರಲ್ಲಿ 33 ಕೊರಗ ಕುಟುಂಬಗಳಿಗೆ ಮನೆ ನಿವೇಶನ ವಿತರಿಸುವ ಬಗ್ಗೆ ಪಾಲಿಕೆ ನಿರ್ಣಯ ಅಂಗೀಕರಿಸಿದ್ದು, ಇದುವರೆಗೂ ಕಾರ್ಯ ರೂಪಕ್ಕೆ ಬಂದಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕಳೆದ 6 ವರ್ಷಗಳಿಂದ ತುಂಡು ಭೂಮಿಗಾಗಿ 3 ಭಾರಿ ಪ್ರತಿಭಟಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ಪ್ರಜಾ ಪ್ರಭುತ್ವದ ಅಣಕವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪ್ರತಿಭಟನೆಯಲ್ಲಿ ಆದಿವಾಸಿ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ್‌ ವಾಮಂಜೂರು, ಕೃಷ್ಣ ಇನ್ನಾ, ಜಿಲ್ಲಾ ಮುಂದಾಳು ರಶ್ಮಿ ವಾಮಂಜೂರು, ಮಂಗಳ ಜ್ಯೋತಿ ಘಟಕದ ಅಧ್ಯಕ್ಷ ಕರಿಯ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here