ಮಂಗಳೂರು: ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಆರಂಭಗೊಂಡು 7 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದು ನನ್ನ ಅವಧಿಯಲ್ಲಿ ಆದ ಕಾಮಗಾರಿಯೇ ಹೊರತು ಅದರ ನಂತರ ಕಾಮಗಾರಿ ಮುಂದುವರಿದಿಲ್ಲ ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಕಾರ್ಪರೇಟರ್ ಚೌಟ ಅವರ ಸುರತ್ಕಲ್ ಮಾರ್ಕೆಟ್ ಹಿಂದಿನ ಶಾಸಕರ ತರಾತುರಿ ನಿರ್ಧಾರ ಎಂಬ ಹೇಳಿಕೆಯನ್ನು ಖಂಡಿಸಿ ಕಾರ್ಪೊರೇಟರ್ ವರುಣ್ ಚೌಟ, ಮೇಯರ್ ಮತ್ತು ಮಂಗಳೂರು ಉತ್ತರದ ಶಾಸಕರು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ರಾಜ್ಯದಲ್ಲಿ ಯಾವುದೇ ಮಾರುಕಟ್ಟೆಗೆ ನೀಡದಷ್ಟು ಅನುದಾನವನ್ನು ಸುರತ್ಕಲ್ ಮಾರುಕಟ್ಟೆಗೆ ತಂದಿದ್ದೇನೆ. 60 ಕೋಟಿ ಅನುದಾನ ಬಂದಿದ್ದು ಮಂಗಳೂರಿಗೆ ಸಿಕ್ಕಿದ ಭಾಗ್ಯವಾಗಿದೆ. ಇಲ್ಲಿನ ಶಾಸಕರು ಮತ್ತು ಹಿಂದಿನ ಸರಕಾರದ ಸಚಿವರು ಗುತ್ತಿಗೆದಾರರಿಂದ ಹೆಚ್ಚಿನ ಕಮಿಷನ್ ಗೆ ಬೇಡಿಕೆ ಇಟ್ಟಿದ್ದು ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾನೆ.
ಇಲ್ಲಿನ ಶಾಸಕರು ಜಾತಿ ರಾಜಕೀಯದ ಮೂಲಕ ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಪಡೆದು ಜನರಿಗೆ ಮೋಸ ಮಾಡುತ್ತಿದ್ದಾರೆ. ಕಾಟಿಪಳ್ಳದ ಹಿಂದೂ ದೇಗುಲದ ರಸ್ತೆಗೆ ಮೀಸಲಿಟ್ಟ 58 ಕೋಟಿ ಅನುದಾನವನ್ನು ಬೇರೆ ಕೆಲಸಕ್ಕೆ ಬಳಸಿದ್ದಾರೆ. ದೇಗುಲ ರಸ್ತೆಗೆ ಕೇವಲ 18 ಕೋಟಿ ಮಾತ್ರ ಬಳಕೆ ಮಾಡಿ ಹಿಂದೂಗಳಿಗೆ ಮೋಸ ಮಾಡಲಾಗಿದೆ.
ಕ್ಷೇತ್ರದಲ್ಲಿ ಗಾಳಿ ಮಳೆಗೆ 25 ಕ್ಕೂ ಅಧಿಕ ಮನೆ ಮತ್ತು 1 ಶಾಲೆಗ ಹಾನಿಯಾಗಿದೆ. ಆದರೆ ಶಾಸಕರು ಈ ಭಾಗದ ಜನರಿಗೆ ಧೈರ್ಯ ತುಂಬುವ ಬದಲು ಧರ್ಮ ರಾಜಕೀಯ ಮಾಡಿದ್ದಾರೆ. ಒಂದು ಧರ್ಮದ ಮನೆಗೆ ಹೋಗಿ ಪರಿಹಾರ ನೀಡುವ ಬರವಸೆ ನೀಡಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಶಾಸಕರಾಗಿ ಅಧಿಕಾರ ಪಡೆದು ಧರ್ಮ ರಾಜಕೀಯ ಮಾಡುತ್ತಿದ್ದಾರೆ. ಈ ಭಾಗದ ಕಾರ್ಪೊರೇಟರ್ ಶಾಸಕರ ಓಲೈಕೆ ಮಾಡುವ ಮೂಲಕ ಹಳ್ಳಕ್ಕೆ ಬಿದ್ದಿದ್ದಾರೆ. ಈ ಹಿಂದೆ ನಾನು ಕಾಂಗ್ರೆಸ್ ನಲ್ಲಿದ್ದಾಗ ಶಾಸಕರ ತಪ್ಪುಗಳ ವಿರುದ್ದ ಧ್ವನಿ ಎತ್ತಿದ್ದೆ, ಈಗ ಶಾಸಕರ ತಪ್ಪುಗಳನ್ನು ಹೇಳಿ ಕಿವಿ ಹಿಂಡುವ ವಿರೋಧ ಪಕ್ಷದ ನಾಯಕರು ಯಾರೂ ಇಲ್ಲ ಎಂದು ಮೊಯಿದೀನ್ ಬಾವಾ ಹೇಳಿದ್ದಾರೆ.