ಸಮಯಪ್ರಜ್ಞೆ ಮೆರೆದ ಬಸ್ಸು ಚಾಲಕ, ನಿರ್ವಾಹಕ-ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿಯ ರಕ್ಷಣೆ

ಮಂಗಳೂರು: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಎದೆನೋವು ಕಾಣಿಸಿಕೊಂಡಾಗ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸುವ ಮೂಲಕ ಸಮಯ ಪ್ರಜ್ಞೆ ತೋರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ರೂಟ್ ನಂ.13 ಎಫ್ ನ ಕೃಷ್ಣ ಪ್ರಸಾದ್ ಬಸ್ ಕೂಳೂರು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತದ ಮುನ್ಸೂಚನೆ ದೊರಕಿತ್ತು. ಈ ವೇಳೆ ವಿಷಯದ ಗಂಭೀರತೆ ಅರಿತ ಬಸ್ ಚಾಲಕ ಹಾಗೂ ನಿರ್ವಾಹಕರಾದ ಗಜೇಂದ್ರ ಕುಂದರ್, ಮಹೇಶ್ ಪೂಜಾರಿ ಹಾಗೂ ಸುರೇಶ್ ಅವರು ಇತರ ಪ್ರಯಾಣಿಕರೊಂದಿಗೆ ಬಸ್ಸನ್ನು ಆ್ಯಂಬುಲೆನ್ಸ್ ನಂತೆ ಹಾರನ್ ಹಾಕಿಕೊಂಡು 6 ಕಿ.ಮೀ. ದೂರವನ್ನು 6 ನಿಮಿಷದಲ್ಲಿ ಕ್ರಮಿಸಿ ವಿದ್ಯಾರ್ಥಿನಿಯನ್ನು ನಗರದ ಕಂಕನಾಡಿಯಲ್ಲಿರುವ ಫಾದರ್‌ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ವಿದ್ಯಾರ್ಥಿನಿಗೆ ತಕ್ಷಣ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬಸ್ ಚಾಲಕ, ನಿರ್ವಾಹಕರ ಮಾನವೀಯ ಹಾಗೂ ಸಮಯ ಪ್ರಜ್ಞೆ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here