ನಾಗಾರಾಧನೆಯಿಂದ ಶಿವಕೃಪೆ – ನಾಗದೇವನಿಗೆ ಶರಣೆನ್ನುವ ನಾಗರ ಪಂಚಮಿ

ಮಂಗಳೂರು: ಹಿಂದೂ ಸಂಸ್ಕೃತಿ ಪ್ರಕಾರ ಶ್ರಾವಣದಲ್ಲಿ ಎಲ್ಲರೂ ತಮ್ಮ ಮನೆಗಳಲ್ಲಿ ನಾಗದೇವರನ್ನು ಆರಾಧಿಸುವ ಮೂಲಕ ನಾಗರ ಪಂಚಮಿ ಆಚರಿಸುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ನಾಗದೇವತೆಗಳನ್ನು ಪೂಜಿಸುವ ಸಂಪ್ರದಾಯ ಇಂದು ನಿನ್ನೆಯದ್ದಲ್ಲ. ಬದಲಾಗಿ ಅನಾಧಿಕಾಲದಿಂದಲೂ ನಡೆದು ಬಂದಿದೆ. ಈ ದಿನದಂದು ನಾಗದೇವತೆಗಳನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆ. ನಾಗರ ಪಂಚಮಿ ಆಚರಣೆ ಬಗ್ಗೆ ಕೆಲವು ಪೌರಾಣಿಕ ಕಥೆಗಳು ಪ್ರತೀತಿಯಲ್ಲಿದ್ದು ಜನಪ್ರಿಯ. ಈ ಕಥೆಗಳ ಆಧಾರದ ಮೇಲೆ ನಾಗರ ಪಂಚಮಿ ಹಬ್ಬದ ಆಚರಣೆ ಆರಂಭವಾಗಿದೆ.

ಪುರಾಣದ ಪ್ರಕಾರ ಸಾಗರ ಮಂಥನದ ಸಮಯದಲ್ಲಿ ಸರ್ಪಗಳು ತಮ್ಮ ತಾಯಿಯ ಮಾತನ್ನು ಕೇಳದೇ ಇರುವ ಕಾರಣಕ್ಕೆ ಶಾಪಗ್ರಸ್ತವಾಗುತ್ತದೆ. ಜನಮೇಜಯನ ಯಾಗದಲ್ಲಿ ಸರ್ಪಗಳು ಸುಟ್ಟು ಬೂದಿಯಾಗುತ್ತದೆ.ಅದರ ನಂತರದ ಮಹಾಭಾರತ ಕಾಲದಲ್ಲಿ ಜನಮೇಜಯನ ನಾಗಯಾಗದ ಸಮಯದಲ್ಲಿ ದೊಡ್ಡ ದೈತ್ಯಾಕಾರದ ಹಾವುಗಳು ಬೆಂಕಿಯಲ್ಲಿ ಬಿದ್ದು ಹೊತ್ತಿ ಉರಿಯಲು ಆರಂಭವಾಗುತ್ತದೆ. ಇದರಿಂದ ಭಯಭೀತವಾದ ಹಾವುಗಳು ಬ್ರಹ್ಮದೇವನನ್ನು ಆಶ್ರಯಿಸಿ ಸಹಾಯ ಯಾಚಿಸುತ್ತದೆ. ಬ್ರಹ್ಮದೇವನು ಪಂಚಮಿ ತಿಥಿಯಂದೇ ಇದಕ್ಕೆ ಪರಿಹಾರವನ್ನು ಸೂಚಿಸಿದ್ದು ಬ್ರಹ್ಮ ಸರ್ಪ ವಂಶದ ಮಹಾತ್ಮ ಜರತ್ಕಾರುವಿನ ಮಗನಾದ ಆಸ್ತಿಕ್‌ ಮುನಿಯು ಶ್ರಾವಣ ಮಾಸದ 5ನೇ ದಿನದಂದು ಹಾಲನ್ನು ಸುರಿಯುವ ಮೂಲಕ ಯಾಗದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಹಾವುಗಳನ್ನು ರಕ್ಷಿಸುತ್ತಾನೆ. ಅಂದಿನಿಂದ ನಾಗರ ಪಂಚಮಿ ಆಚರಣೆ ಆರಂಭಗೊಂಡಿದೆ ಎನ್ನಲಾಗುತ್ತಿದೆ.

ಇನ್ನೊಂದು ಕಥೆಯ ಪ್ರಕಾರ, ಸಾಗರ ಮಂಥನ ನಡೆದಾಗ ಯಾರಿಗೂ ಹಗ್ಗ ಸಿಗುತ್ತಿರಲಿಲ್ಲ. ಈ ವೇಳೆ ವಾಸುಕಿ ನಾಗನನ್ನು ಹಗ್ಗವಾಗಿ ಬಳಸಲಾಗುತ್ತದೆ. ದೇವತೆಗಳು ವಾಸುಕಿ ನಾಗನ ಬಾಲವನ್ನು ಹಿಡಿದರೆ ರಾಕ್ಷಸರು ಬಾಯಿ ಹಿಡಿಯುತ್ತಾರೆ. ಮಂಥನದ ಸಮಯದಲ್ಲಿ ಮೊದಲು ಹೊರಬಂದ ವಿಷವನ್ನು ಪರಮಶಿವನು ತನ್ನ ಕಂಠದಲ್ಲಿಟ್ಟುಕೊಂಡು ಲೋಕ ರಕ್ಷಣೆ ಮಾಡುತ್ತಾನೆ. ಇನ್ನು ನಂತರ ಬಂದ ಅಮೃತ ಕುಡಿದ ದೇವತೆಗಳು ಅಮರತ್ವವನ್ನು ಪಡೆಯುತ್ತಾರೆ. ಅಂದಿನಿಂದ ಸಾಗರ ಮಂಥನದ ದಿನವನ್ನು ನಾಗರ ಪಂಚಮಿಯಾಗಿ ಆಚರಿಸುತ್ತಾರೆ ಎಂದೂ ಹೇಳಲಾಗುತ್ತದೆ.

ಇನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಶ್ರೀ ಕೃಷ್ಣನು ಸರ್ಪವನ್ನು ಸೋಲಿಸಿ ವೃಂದಾವನದ ಜನರನ್ನು ರಕ್ಷಿಸುತ್ತಾನೆ. ಹಾವಿನ ಹೆಡೆಯ ಮೇಲೆ ನೃತ್ಯ ಮಾಡಿದ ಶ್ರೀ ಕೃಷ್ಣನನ್ನು ಜನರು ನಾಗಯ್ಯ ಎಂದು ಕರೆಯುತ್ತಾರೆ. ಮಾತ್ರವಲ್ಲ ಅಂದಿನಿಂದ ಹಾವುಗಳಿಗೆ ಪೂಜೆ ನಡೆದುಕೊಂಡು ಬಂದಿದೆ ಎಂದೂ ಹೇಳಲಾಗುತ್ತದೆ. ಇದೆಲ್ಲವೂ ರೂಢಿಗತ ಜನಪ್ರಿಯ ನಂಬಿಕೆಗಳಾಗಿದ್ದು ಇದರ ಆಧಾರದಲ್ಲಿಯೇ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ.

ಕಾಳಸರ್ಪ ದೋಷವನ್ನು ತೊಡೆದು ಹಾಕಲು ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಬಾರಿ ಆ.9ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದ್ದು ಪಂಚಮಿ ತಿಥಿಯು ಬೆಳಿಗ್ಗೆ 8.15ಕ್ಕೆ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 6.09ಕ್ಕೆ ಕೊನೆಗೊಳ್ಳುತ್ತದೆ. ಆ.9ರ ಮದ್ಯಾಹ್ನ 12.13ರಿಂದ 1 ಗಂಟೆಯ ವರೆಗೆ ಶುಭ ಸಮಯವೆಂದು ಪರಿಗಣಿಸಲಾಗಿದೆ. ಈ ದಿನ ಪ್ರದೋಷ ಕಾಲದಲ್ಲಿ ನಾಗದೇವತೆಯನ್ನು ಪೂಜಿಸುವುದು ಮಂಗಳಕರವೆಂದು ಹೇಳಲಾಗಿದೆ. ಆ.9ರ ಪ್ರದೋಷ ಕಾಲ ಸಂಜೆ 6.33ರಿಂದ 8.20ರವರೆಗೆ ನಾಗ ಪೂಜೆ ಮಾಡಬಹುದಾಗಿದೆ. ಹೀಗೆ ಮಾಡುವುದರಿಂದ ಜಾತಕದಲ್ಲಿನ ನಾಗದೋಷದ ನಿವಾರಣೆಯಾಗಿ ಹಾವಿನ ಭಯ ದೂರವಾಗುತ್ತದೆ ಎಂಬುವುದು ಧಾರ್ಮಿಕ ನಂಬಿಕೆ. ನಾಗಪೂಜೆಯಿಂದ ಕುಟುಂಬದ ಸದಸ್ಯರು ಹಾವುಗಳಿಂದ ರಕ್ಷಣೆ ಪಡೆಯುವುದರೊಂದಿಗೆ ವೈವಾಹಿಕ ಜೀವನದ ಸಮಸ್ಯೆ, ಸಂತಾನ ಭಾಗ್ಯದ ಕೊರತೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ.

ಶಿವನಿಗೆ ಹಾವುಗಳು ಇಷ್ಟವಾಗಿದ್ದು ನಾಗಾರಾಧನೆಯಿಂದ ಶಿವಕೃಪೆಯು ಲಭಿಸುತ್ತದೆ.ಆಧ್ಯಾತ್ಮಿಕ ಪ್ರಗತಿಯೊಂದಿಗೆ ಬಯಕೆಗಳು ಈಡೇರುತ್ತದೆ ಎನ್ನುವುದು ನಾಗಾರಾಧನೆಯ ಹಿಂದಿನ ಉದ್ದೇಶ.
ಓಂ ಶ್ರೀ ಭಿಲಾತ್ ದೇವಾಯ ನಮಃ
ಭುಜಂಗೇಶಾಯ ವಿದ್ಮಹೇ….ಉರಗೇಸಾಯ ಧೀಮಹಿ.. ತನ್ನೋ ನಾಗ: ಪ್ರಚೋದಯಾತ್||
ಭುಜಂಗೇಶಾಯ ವಿದ್ಮಹೇ… ಸರ್ಪ ರಾಜಾಯ ಧೀಮಹಿ.. ತನ್ನೋ ನಾಗ: ಪ್ರಚೋದಯಾತ್||
ಸರ್ವೇಂ ನಾಗ: ಪ್ರಿಯಂತಂ ಮೇ ಯೇ ಕೇಚಿಂತ ಪ್ರಧ್ವಿತಲೇ|
ಯೇ ಚ ಹೇಳೀಮರೀಚಿಸ್ಥಾಯೇ ಸ್ತರೇ ದಿವಿ ಸಂಸ್ಥಿತಾಃ
ಈ ಮಂತ್ರದಿಂದ ನಾಗಾರಾಧನೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here