ಯಡಿಯೂರಪ್ಪ ಮಕ್ಕಳಿಂದ ಚೆಕ್‌ ಗೆ ಸಹಿ – ರೈತನ ಮಗ ಎಂದು ಹೇಳಿ ಐಷಾರಾಮಿ ಹೊಟೇಲ್‌ನಲ್ಲಿ ಕೂತು ಕಡತ ವೀಕ್ಷಿಸುತ್ತಿದ್ದ ಕುಮಾರಸ್ವಾಮಿ – ಮಾಜಿ ಸಚಿವ ಅಭಯಚಂದ್ರ ಜೈನ್‌

ಮಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ನವರು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಹಾಕುವ ಸಲುವಾಗಿ ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಚಿವ ಅಭಯ್‌ಚಂದ್ರ ಜೈನ್ ಆರೋಪಿಸಿದ್ದಾರೆ.


ಆ.5ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅಭಯ್‌ಚಂದ್ರ ಜೈನ್, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಕೂತು ಕಡತಗಳಿಗೆ ಸಹಿ ಮಾಡುತ್ತಿದ್ದರು. ಮಣ್ಣಿನ ಮಗ ಎಂದು ಹೇಳಿ ಬೆಂಗಳೂರಿನ ಐಷಾರಾಮಿ ಹೊಟೇಲ್‌ನಲ್ಲಿ ಕೂತು ಕಡತ ವೀಕ್ಷಿಸುವವರು ಯಾವ ರೀತಿಯಲ್ಲಿಯೂ ಮಣ್ಣಿನ ಮಗ ಆಗಲು ಸಾಧ್ಯ. ಎಲ್ಲಾ ಕಡೆಗಳಲ್ಲಿ ನಾನು ರೈತನ ಮಗ ಎಂದು ಹೇಳಿ ತಿರುಗುವವರು ಆ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಸಹಿಯನ್ನು ಅವರ ಮಕ್ಕಳು ಹಾಕುತ್ತಿದ್ದರು. ಎಷ್ಟೋ ಚೆಕ್‌ಗಳಿಗೆ ಯಡಿಯೂರಪ್ಪ ಅವರ ಮಕ್ಕಳು ಸಹಿ ಮಾಡಿದ್ದಾರೆ. ಆ ದಿನಗಳಲ್ಲಿ ದೊಡ್ಡ ಮಟ್ಟಿನ ಭ್ರಷ್ಟಾಚಾರವಾಗಿದೆ. ಅದರಲ್ಲಿ ಪ್ರಮುಖವಾಗಿ ಮೈನಿಂಗ್ ಹಗರಣ ದೊಡ್ಡ ಮಟ್ಟಿನ ಸುದ್ದಿ ಮಾಡಿದ್ದು, ಯಡಿಯೂರಪ್ಪ ಮತ್ತು ದೇವೇಗೌಡ ಕುಟುಂಬದವರು ಕೇವಲ ಅಧಿಕಾರದ ಹಿಂದೆ ಇದ್ದಾರೆ. ಅವರಿಗೆ ಯಾವುದೇ ರೀತಿಯಲ್ಲಿಯೂ ಬಡವರ ಮೇಲೆ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಕೆಡಿಸುವ ನಿಟ್ಟಿನಲ್ಲಿ ಪಾದಯಾತ್ರೆಯನ್ನು ಕೈಗೊಂಡಿದ್ದು, ಪ್ರತಿನಿತ್ಯ ನಾಯಕರುಗಳ ವಿಶ್ರಾಂತಿಗೆ ರೆಸಾರ್ಡ್, ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ನಿಲ್ಲುತ್ತಿದ್ದಾರೆ. ಆದರೆ ನಾವು ಜನಾರ್ಧನ ರೆಡ್ಡಿ ಅವರ ಮೈನಿಂಗ್ ಹಗರಣದ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಸಮಯದಲ್ಲಿ ಶಾಲೆಗಳ ಚಾವಡಿಯಲ್ಲಿ ಮಲಗುತ್ತಿದ್ದೆವು. ಆದರೆ ಈಗ ಸಿದ್ದರಾಮಯ್ಯ ಹಿಂದಿನ ಹಗರಣಗಳ ವಿರುದ್ಧ ತನಿಖೆ ನಡೆಸಲು ಪ್ರಾರಂಭಿಸಿದ್ದೆ ಈ ತನಿಖೆಯನ್ನು ತಡೆಯುವ ಸಲುವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಬಳಸಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿಯವರು ರಾಜ್ಯಪಾಲರನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರಿಗೆ ನೋಟೀಸು ನೀಡಿದ್ದು, ಬಿಜೆಪಿಯವರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಸಂವಿಧಾನ ಇರುವವರೆಗೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರೂ ಇದ್ದಾರೆ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಮೇಲೆ ಅನಾವಶ್ಯಕವಾಗಿ ಬಿಜೆಪಿ ಮತ್ತು ಜೆಡಿಎಸ್ ಆರೋಪ ಮಾಡುತ್ತಿದ್ದು, ದೊಂಬರಾಟವಾಡುತ್ತಿದೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಂತ ಪ್ರಯತ್ನದಿಂದ ಈ ಮಟ್ಟಕ್ಕೆ ಬಂದಿದ್ದಾರೆ. ಆದರೆ ಕುಮಾರಸ್ವಾಮಿ ಅವರು ತಮ್ಮ ತಂದೆಯವರ ಹೆಸರಿನಿಂದ ಹಾಗೂ ಬಿಜೆಪಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದು, ಅವರಿಗೆ ಕಷ್ಟ ಏನು ಎಂದು ಗೊತ್ತಿಲ್ಲ ಎಂದು ಅಭಯ್‌ಚಂದ್ರ ಜೈನ್ ದೂರಿದ್ದಾರೆ.

LEAVE A REPLY

Please enter your comment!
Please enter your name here