ಮಂಗಳೂರು: ಇ-ಖಾತಾ ನೀಡುವಂತೆ ಕೋರಿ ಅರ್ಜಿ ಹಾಕಿ 6 ತಿಂಗಳು ಕಳೆದರೂ ಮಂಗಳೂರಿನ ಹಿರಿಯ ನಾಗರಿಕರೊಬ್ಬರಿಗೆ ಇ-ಖಾತಾ ನೀಡದೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದು, ಅರ್ಜಿದಾರ ಕಾನೂನು ಸಮರಕ್ಕೆ ಮುಂದಾದ ಘಟನೆ ನಡೆದಿದೆ.
30 ದಿನದಲ್ಲಿ ಇ-ಖಾತಾ ನೀಡಬೇಕು ಎಂಬ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಪಾಲಿಕೆಯ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ಕಳೆದ ಆರು ತಿಂಗಳಿನಿಂದ ಮನೆಯಿಂದ ಪಾಲಿಕೆಗೆ ಅಲೆದಾಡಿ ಹೈರಾಣಾಗಿರುವ ಹಿರಿಯ ನಾಗರಿಕರು, ಕಾನೂನು ಸಮರಕ್ಕೆ ಮುಂದಾಗಿದ್ದು, ವಕೀಲರ ಮೂಲಕ ನೋಟೀಸನ್ನೂ ಜಾರಿಗೊಳಿಸಿದ್ದಾರೆ.
ಕಳೆದ ಫೆ.6ರಂದು ಮಂಗಳೂರಿನ ಹಿರಿಯ ನಾಗರಿಕರಾದ ಮ್ಯಾಕ್ಸಿ ಕ್ರಾಸ್ಟೋ ಎಂಬವರು ಇ-ಖಾತಾ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇದಕ್ಕಾಗಿ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅವರು ಹಾಜರುಪಡಿಸಿದ್ದರು. ಮಾತ್ರವಲ್ಲದೆ, ನಿಗದಿತ ಶುಲ್ಕವನ್ನೂ ಪಾವತಿ ಮಾಡಿದ್ದರು.
ಇದಾಗಿ ಕೆಲ ಸಮಯದ ಬಳಿಕ, 2024-25ರ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದರು. ಇದನ್ನು ಪಾವತಿಸಿದ ನಂತರ ಆ ಆಸ್ತಿ ತೆರಿಗೆ ರಶೀದಿಯನ್ನು ಅಪ್‌ಡೇಟ್ ಮಾಡಿಸುವ ನೆಪದಲ್ಲಿ ಹಿರಿಯ ನಾಗರಿಕರನ್ನು ಹತ್ತಾರು ದಿನಗಳ ಕಾಲ ಕಛೇರಿಗೆ ಅಲೆದಾಡುವಂತಾಗಿತ್ತು.
ಎಷ್ಟು ಬಾರಿ ಪಾಲಿಕೆಗೆ ಭೇಟಿ ನೀಡಿದರೂ ಅಧಿಕಾರಿಗಳು ಮಾತ್ರ ಕೇಂದ್ರ ಸ್ಥಾನದಲ್ಲಿರುತ್ತಿರಲಿಲ್ಲ. ಚುನಾವಣೆ, ಮೀಟಿಂಗ್ ಮೊದಲಾದ ಕುಂಟು ನೆಪ ಹೇಳಿಕೊಂಡು ಆರು ತಿಂಗಳು ಕಾಲ ತಳ್ಳಿದ್ದಾರೆ. ಇದರಿಂದ ನೊಂದ ಹಿರಿಯ ನಾಗರಿಕ ಮ್ಯಾಕ್ಸಿ ಅವರು ಜು.20ರಂದು ವಕೀಲರ ಮೂಲಕ ಕಾನೂನು ರೀತ್ಯಾ ನೋಟೀಸ್ ಜಾರಿಗೊಳಿಸಿದ್ದಾರೆ.
ದಿನಾಂಕ: 02-03-2023ರ ರಿಟ್ ಅರ್ಜಿ 4821/2023 ಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ದೂರುದಾರ, ಈ ತೀರ್ಪಿನ ಪ್ರಕಾರ 30 ದಿನಗಳಲ್ಲಿ ಇ-ಖಾತಾ ನೀಡಬೇಕೆಂಬ ಸ್ಪಷ್ಟ ನಿರ್ದೇಶನವಿದ್ದಾಗ್ಯೂ ಈ ತೀರ್ಪನ್ನು ಪಾಲಿಸದೆ ತಮ್ಮನ್ನು ಟೇಬಲಿನಿಂದ ಟೇಬಲಿಗೆ ಅಲೆಸಿರುವ ಪಾಲಿಕೆ ಅಧಿಕಾರಿಗಳ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ತಮಗಾದ ದೈಹಿಕ ಹಾಗೂ ಮಾನಸಿಕ ಕಿರುಕುಳ ಮತ್ತು ಇ-ಖಾತಾ ನೀಡುವಲ್ಲಿ ಆಗಿರುವ ವಿಳಂಬಕ್ಕೆ ಪರಿಹಾರ ನೀಡುವಂತೆ ಅವರು ಪಾಲಿಕೆ ಅಧಿಕಾರಿಗಳು ಮತ್ತು ಸರ್ಕಾರದ ಇಲಾಖಾ ಮುಖ್ಯಸ್ಥರ ವಿರುದ್ಧ ನೋಟೀಸ್ ಜಾರಿಗೊಳಿಸಿದ್ದಾರೆ.