ಮಂಗಳೂರು: ಕರಾವಳಿ ಭಾಗದಲ್ಲಿ ಎಡಬಿಡದೆ ಭಾರೀ ಮಳೆ ಸುರಿಯುತ್ತಿರುವುದರಿಂದ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭೂ ಕುಸಿತದಿಂದಾಗಿ ಹಾನಿಯಾಗಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸದಾಗಿ ವೇಗದ ಮಿತಿಯನ್ನು ನಿಗದಿಪಡಿಸಿದೆ.
ಸುರತ್ಕಲ್ ಮತ್ತು ತೊಕ್ಕೊಟ್ಟು ನಡುವಿನ ರಾಷ್ಟ್ರೀಯ ಹೆದ್ದಾರಿ-66 ಮಾರ್ಗದಲ್ಲಿ ಹಾಗೂ ಬಿ.ಸಿ ರೋಡ್ ಮತ್ತು ನಂತೂರು ನಡುವಿನ ರಾಷ್ಟ್ರೀಯ ಹೆದ್ದಾರಿ-73 ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಗಂಟೆಗೆ 40 ಕಿ.ಮೀ ವೇಗದ ಮಿತಿಯನ್ನು ಹೇರಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಈ ನಡುವೆ ಎಲ್ಲಾ ಇತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ವೇಗವನ್ನು ಗಂಟೆಗೆ 60 ಕಿಮೀಗೆ ಮಿತಿಗೊಳಿಸುವಂತೆ ಪ್ರಾಧಿಕಾರ ವಾಹನ ಸವಾರರಿಗೆ ತಿಳಿಸಿದೆ.