ಮಂಗಳೂರು: ಕಳೆದ ಜು.30ರಂದು ಮಂಗಳೂರು ನಗರದ ಬಿಜೈಯ ಮನೆಯಿಂದ ನಾಪತ್ತೆಯಾಗಿದ್ದ ಹುಡುಗಿಯನ್ನು ಮಂಗಳೂರಿನ ಬರ್ಕೆ ಪೋಲಿಸರು ಕಾರ್ಕಳ ಮೂಲದ ಯುವಕನ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಕ್ಯಾಲಿಸ್ತಾ ಫೆರ್ರಾವೋ (18) ಎಂಬಾಕೆ ನಾಪತ್ತೆಯಾಗಿದ್ದು ಈ ಬಗ್ಗೆ ಬರ್ಕೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೋಲಿಸರು ಆಕೆ ಬಳಸುತ್ತಿದ್ದ ಇನ್ಸ್ಟಾಗ್ರಾಮ್ ಅಕೌಂಟ್ ಮತ್ತು ಮೋಜ್ ಆ್ಯಪ್ ಗಳ ಅಕೌಂಟ್ ಪರಿಶೀಲಿಸಿದಾಗ ನಾಪತ್ತೆಗೆ ಕಾರಣ ಬಯಲಾಗಿದೆ.
ನಾಪತ್ತೆಯಾಗಿದ್ದ ಕ್ಯಾಲಿಸ್ತಾ ಫೆರ್ರಾವೋ ಳಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಜೇಂದ್ರ ಬೈಲ್ ನಿವಾಸಿ ಸೂರಜ್ ಪೂಜಾರಿ (23) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಬಳಿಕ ಆತನ ಜೊತೆ ಪ್ರೇಮಾಂಕುರವಾಗಿತ್ತು..
ಕಳೆದ ಜು.30 ರಂದು ಮನೆಯಿಂದ ನಾಪತ್ತೆಯಾಗಿದ್ದ ಕ್ಯಾಲಿಸ್ತಾ ಸೀದಾ ಪ್ರಿಯಕರನ ಮನೆಗೆ ತೆರಳಿದ್ದಳು. ಪೋಲಿಸರ ತನಿಖೆ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ. ಪೋಲಿಸರು ಸೂರಜ್ ಪೂಜಾರಿ ಮನೆಗೆ ಭೇಟಿ ನೀಡಿದಾಗ ನಾಪತ್ತೆಯಾಗಿದ್ದ ಹುಡುಗಿ ಆತನ ಮನೆಯಲ್ಲಿ ಸಿಕ್ಕಿದ್ದಾಳೆ. ಇಬ್ಬರನ್ನೂ ಬರ್ಕೆ ಠಾಣೆಗೆ ಕರೆತಂದು ವಿಚಾರಿಸುವ ವೇಳೆ ಇವರಿಬ್ಬರ ಪ್ರೀತಿಯ ವಿಚಾರ ಬೆಳಕಿಗೆ ಬಂದಿದೆ.
ಆದರೆ ವಿಚಾರಣೆ ವೇಳೆ ನಾಪತ್ತೆಯಾಗಿದ್ದ ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಿಲ್ಲದಿರುವುದು ವಿಚಾರಣಾಧಿಕಾರಿಯ ಗಮನಕ್ಕೆ ಬಂದಿದೆ. ಹುಡುಗಿ ಸದ್ಯ ತಂದೆ ತಾಯಿಯ ಜೊತೆ ಹೋಗುವುದಿಲ್ಲ ಎಂದು ತಿಳಿಸಿರುವ ಕಾರಣ ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ.