ಕೇಬಲ್ ಆಪರೇಟರ್‌ಗಳೊಂದಿಗೆ ಮೆಸ್ಕಾಂ ಮಂಗಳೂರು ವಿಭಾಗದ ಅಧಿಕಾರಿಗಳ ಸಭೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು, ಸ್ಥಳೀಯ ಕೇಬಲ್ ಆಪರೇಟರ್‌ಗಳು ಮೆಸ್ಕಾಂನ ವಿದ್ಯುತ್ ಕಂಬಗಳಲ್ಲಿ ಕೇಬಲ್‌ಗಳನ್ನು ಸುರುಳಿ ಸುತ್ತಿಕೊಂಡು, ತೀರಾ ಕೆಳಮಟ್ಟದಲ್ಲಿ ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುವ ರೀತಿಯಲ್ಲಿ ಅಳವಡಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಮಂಗಳೂರು ಮೆಸ್ಕಾಂ ವಿಭಾಗದ ಸಭೆಯು ಆಗಸ್ಟ್ 6 ರಂದು ನಡೆಯಿತು.

ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಬಿ.ಎಸ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೇಬಲ್ ಅಳವಡಿಕೆಯಿಂದಾಗಿ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದಲ್ಲಿ ಸಂಬಂಧಿಸಿದ ಕೇಬಲ್ ಆಪರೇಟರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಲಾಯಿತು. ಇನ್ನು ಮುಂದೆ ಯಾವುದೇ ಹೊಸ ಕೇಬಲ್‌ಗಳನ್ನು ಅಳವಡಿಸುವ ಮುನ್ನ ಮತ್ತು ನವೀಕರಣಕ್ಕೆ ಮಹಾನಗರ ಪಾಲಿಕೆಯ ನಿರಾಕ್ಷೇಪಣಾ ಪತ್ರ ಪಡೆಯಲು ಮಹಾನಗರ ಪಾಲಿಕೆಯು ಸೂಚಿಸಿದೆ. ಪಾಲಿಕೆಯ ನಿರಾಕ್ಷೇಪಣಾ ಪತ್ರ ಮೆಸ್ಕಾಂ ಅನುಮತಿಗೆ ಅಗತ್ಯ ಎಂದು ಲೋಕಿತ್ ಬಿ. ಎಸ್ ತಿಳಿಸಿದರು.

ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿದ್ದ ಕೇಬಲ್ ಆಪರೇಟರ್‌ಗಳು ಸ್ಪಂದಿಸಿದ್ದು, ಎಲ್ಲರ ಸಮನ್ವಯದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿಯಾಗಿ ಅಳವಡಿಸಲಾಗಿರುವ ಕೇಬಲ್‌ಗಳನ್ನು ಮೆಸ್ಕಾಂ ಇಲಾಖೆಯ ನಿಯಮಾವಳಿಗಳಂತೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮನಪಾ ವ್ಯಾಪ್ತಿಯ ಮೆಸ್ಕಾಂನ ಅತ್ತಾವರ, ಮಣ್ಣಗುಡ್ಡ ಮತ್ತು ಕುಲಶೇಖರ ಉಪ ವಿಭಾಗ ಅಧಿಕಾರಿಗಳಾದ ಚಂದ್ರಶೇಖರ್ ಪೂಜಾರಿ, ವಸಂತ್ ಕುಮಾರ್, ಸತೀಶ್ ಮತ್ತು ವಿಭಾಗದ ಅಧಿಕಾರಿಗಳಾದ ಸೈಯದ್ ರೆಹಮಾನ್ ಮತ್ತು ಶಾಂತಾನಂದ್ ಹಾಗೂ ಕೇಬಲ್ ಆಪರೇಟರ್‌ಗಳು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here