ಮಂಗಳೂರು (ಬೆಂಗಳೂರು): ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯ ವರದಿಗಾಗಿ ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಚನ್ನಪಟ್ಟಣ ಬಳಿ ಬಂದ ಪಾದಯಾತ್ರೆ ವರದಿ ಮಾಡುತ್ತಿದ್ದ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ವರದಿಗಾರರಾದ ಮೋಹನ್, ಜಿ. ಮಂಜುನಾಥ್, ಕ್ಯಾಮೆರಾಮನ್ ಅವಿರಾಜ್ ಹಾಗೂ ಚಾಲಕ ಆನಂದ್ ಮೇಲೆ, ಶಾಸಕ ಹರೀಶ್ ಪೂಂಜಾ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರೆ, ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಾರರಿದ್ದ ಕಾರು ತಡೆದ ಹರೀಶ್ ಪೂಂಜಾ ಬೆಂಬಲಿಗರು, ಕಾರು ಮುಂದಕ್ಕೆ ಹೋಗಲು ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದಾಗ ಪೂಂಜಾ ಬೆಂಬಲಿಗರು ‘ಮಾಧ್ಯಮಗಳಿಂದ ಏನೂ ಕಿತ್ತುಕೊಳ್ಳೋಕೆ ಆಗಲ್ಲ’ ಎಂದು ನಿಂದಿಸಿ ಹಲ್ಲೆ ನಡೆಸಿದ್ದಾರೆ.
ನೀವೇನು ವಿಶೇಷ ವ್ಯಕ್ತಿಗಳ ವಾಹನದಲ್ಲಿ ಯಾಕೆ ಹೋಗ್ತಿದ್ದೀರಿ ನಮ್ಮೊಂದಿಗೆ ಪಾದಯಾತ್ರೆಯಲ್ಲೇ ಬನ್ನಿ ಎಂದು ಹೇಳಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಘಟನೆ ಕುರಿತಂತೆ ಹರೀಶ್ ಪೂಂಜಾ ವಿರುದ್ದ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರಕರ್ತರು ದೂರು ನೀಡಿದ್ದಾರೆ. ಘಟನೆಯನ್ನು ಬಿಜೆಪಿ ವರಿಷ್ಠ ಯಡಿಯೂರಪ್ಪ ಖಂಡಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.